ಎಚ್.ಡಿ.ಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತಿರುವುದು ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಶಾಸಕರ ನಿವಾಸದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಧ್ವನಿ ಇಲ್ಲದ ಸಮುದಾಯ ನೆಮ್ಮದಿಯಾಗಿರಲು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳಿದ್ದು, ಪಕ್ಷದ ಕಾರ್ಯಕರ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಯಾರಿರಬೇಕು. ಪಕ್ಷ ನನಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ. ಅದಕ್ಕೆ ಕಾರಣ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಎಂದು ಸ್ಮರಿಸಿದರು.
ಯಾವುದೇ ಭಿನ್ನಾಭಿಪ್ರಾಯವಿದ್ದರು ಎಲ್ಲವನ್ನೂ ಬದಿಗೊತ್ತಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಕೆಲಸ ಮಾಡಬೇಕಿದೆ. ಅಲ್ಲದೆ ಪಕ್ಷಕ್ಕೆ ಬರುವವರನ್ನು ಸ್ವಾಗತಿಸಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಿಗೆ ಬೂತ್ ಕಮಿಟಿ ಜವಾಬ್ದಾರಿ ನೀಡಬೇಕು ಎಂಬುದನ್ನು ಸ್ಥಳೀಯವಾಗಿ ನೀವೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿ ಎಂದು ಮುಖಂಡರಿಗೆ ಸಲಹೆ ನೀಡಿದರು.
ದಿ.ಆರ್.ಧ್ರುವನಾರಾಯಣ ಅವರ ಪತ್ನಿ ವೀಣಾ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಮೈಮುಲ್ ನಿರ್ದೇಶಕ ಈರೇಗೌಡ, ಚಿಕ್ಕವೀರನಾಯಕ, ಕಾವೇರ, ಎಚ್.ಸಿ.ಮಂಜುನಾಥ್, ಬಾಲಯ್ಯ, ಪಿ.ನಾಗರಾಜು, ಸೋಮೇಶ್, ಸತೀಶ್‌ಗೌಡ, ಮುದ್ದು ಮಲ್ಲಯ್ಯ, ಕೆಂಡಗಣ್ಣಸ್ವಾಮಿ, ಶ್ರೀನಿವಾಸ್, ಭಾಗ್ಯಲಕ್ಷ್ಮೀ, ಬಸವರಾಜಪ್ಪ, ಪ್ರಭಾಕರ, ಇಬ್ರಾಹಿಂ, ಶಿವರಾಜು, ಆನಂದ್ ಇತರರಿದ್ದರು.