ಮೈಸೂರು: ಮುಡಾ ಹಗರಣದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಿ ಪತನಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಹುನ್ನಾರ ನಡೆಸಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಚಾಮುಂಡಿವಿಹಾರ ಕ್ರೀಡಾಂಗಣದ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಯಿತು.
ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ಇದು ತಾರ್ಕಿಕ ಅಂತ್ಯ ಯಾರ ಮನೆ ಬಾಗಿಲು ತಟ್ಟಬಹುದು ಎಂಬ ಕನಿಷ್ಠ ಜ್ಞಾನವಾದರೂ ಆ ನಾಯಕರಿಗಿಲ್ಲ. ಎಫ್‌ಐಆರ್ ಆಗಿರುವ ಕಾರಣ ರಾಜೀನಾಮೆ ನೀಡಬೇಕೆಂಬ ಮಾನದಂಡ ನಿಗದಿ ಪಡಿಸಿದರೆ ಸಿದ್ದರಾಮಯ್ಯ ಮಾತ್ರವಲ್ಲ, ಅನೇಕ ರಾಜಕಾರಣಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹರಿಹಾಯ್ದರು.
ಧರ್ಮದ ಹೆಸರಿನಲ್ಲಿ ರಕ್ತಪಾತ ನಡೆಸಿದವರನ್ನು ಸಮರ್ಥಿಸಿಕೊಂಡು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡವರು ಬೇರೆ, ಬೇರೆ ಪಕ್ಷಗಳ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಕೊಂಡು ಆತ್ಮವಂಚಕರಾಗಿದ್ದಾರೆ
ಧರ್ಮ-ಧರ್ಮಗಳ ನಡುವೆ ಸೌಹಾರ್ದತೆಗೆ ದುಡಿಯುವ ಬಡವರು, ಅಸಹಾಯಕರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಐದು ಗ್ಯಾರಂಟಿ ಯೋಜನೆ ಕೊಟ್ಟ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ನೈತಿಕತೆ ಇವರಿಗೆ ಇದೆಯೇ? ಎಂದು ಪ್ರಶ್ನಿಸಿದರು.
ನೈತಿಕತೆ ಎನ್ನುವುದು ಕ್ರಮೇಣ ಬಲಾಢ್ಯರ ರಾಜಕಾರಣವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಮತ್ತು ಅದೇ ಕಾಲಕ್ಕೆ ದುರ್ಬಲ ವರ್ಗಗಳ ರಾಜಕೀಯ ಏಳಿಗೆ ಹತ್ತಿಕ್ಕಲು ಬಳಸುವ ಸಂಚಿನ ಅಸ್ತ್ರವಾಗಿದೆ.
ಮನುವಾದವನ್ನು ಪ್ರತಿಪಾದಿಸುವ ಬಿಜೆಪಿ ಸರ್ಕಾರವು ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗಗಳ ಮೂಲಕವೇ ಮಟ್ಟಹಾಕಿ, ಬಾಯಿ ಮುಚ್ಚಿಸುವ ಫ್ಯೂಡಲ್ ರಾಜಕಾರಣ ಮಾಡುತ್ತಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಸಂಘಟನೆಯ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಇಟ್ನಾ ರಾಜಣ್ಣ, ಕೊಳಗಟ್ಟ ಕೃಷ್ಣ, ಸುರೇಶ್ ಯರಗನಹಳ್ಳಿ, ಗೋವಿಂದರಾಜು ಅಶೋಕಪುರಂ, ಪುಟ್ಟಸ್ವಾಮಿ ದೇವರಸನಹಳ್ಳಿ, ಸುರೇಶ್ ಶಂಕರಪುರ, ಶ್ರೀನಿವಾಸ್ ಲಂಕೆ, ಕೃಷ್ಣಮೂರ್ತಿ, ಚಿಕ್ಕಣ್ಣ ಹಗಿನವಾಳು, ಮರಿಸ್ವಾಮಿ, ಕೃಷ್ಣರಾಜು ಕಟ್ಟೆಮನುಗನಹಳ್ಳಿ, ಸತೀಶ್ ಕಾಳೀಹುಂಡಿ, ಸಿ.ಸುರೇಶ್, ರಾಜಯ್ಯ ಮಲಾರ ಕಾಲನಿ ಇನ್ನಿತರರಿದ್ದರು.