ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿ.ನರಸೀಪುರದ ಹಿಂದು ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿದ್ರಾಮುಲ್ಲಾ ಖಾನ್ ಸರ್ಕಾರದಲ್ಲಿ ಜಿಹಾದಿಗಳಿಂದ ಹಿಂದು ಯುವಕನ ಕೊಲೆ ಆಗಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಕಾಂಗ್ರೆಸ್ ಸರ್ಕಾರದಲ್ಲಿ ಇಷ್ಟೊಂದು ಸಲೀಸಾಗಿ ಕೊಲೆ ಮಾಡುತ್ತಿದ್ದಾರೆ ನೋಡಿ. ನಾವೆಲ್ಲ ಒಟ್ಟಾಗಿ ನಮ್ಮ ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕಿದೆ. ನಾವೆಲ್ಲರೂ ಸೇರಿ ಸ್ವಯಂ ಪ್ರೇರಿತವಾಗಿ ತಿ.ನರಸೀಪುರ ಬಂದ್ ಮಾಡೋಣ’ ಎನ್ನುವುದು ಸೇರಿ ‘ರಾಜೀ ಹಿಂದು’ ಎಂಬ ಹೆಸರಿನ ಇನ್‌ಸ್ಟ್ರಾಗ್ರಾಂ ಅಕೌಂಟ್‌ನಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಮೆಲ್ಲಹಳ್ಳಿ ಗ್ರಾಮದ ರವಿಕುಮಾರ್ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಸೈಬರ್ ಕ್ರೈಂ ಠಾಣೆ ಅಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.