ವಿಜಯಪುರ ಜಿಲ್ಲೆಯ ಯರನಾಳ ಗ್ರಾಮದ ಶ್ರೀಶೈಲ ವಾಲಿಕಾರ ಎನ್ನುವ ಅಭಿಮಾನಿ ದೀಡ ನಮಸ್ಕಾರ ಹಾಕುತ್ತ ಹೊರಟಿರುವುದು. 
ಜಿಲ್ಲೆ

ಸಿದ್ದರಾಮಯ್ಯ ಮುಡಾ ಆರೋಪದಿಂದ ಮುಕ್ತರಾಗಲಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಮುಡಾ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಹಾಗೂ ವಿಪಕ್ಷಗಳಿಂದ ಮುಜುಗರ ಅನುಭವಿಸುವಂತೆ ಮಾಡಿದೆ. ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪದಿಂದ ಮುಕ್ತರಾಗಿ ಹೊರಬರಲಿ ಎಂದು ಅವರ ಅಪ್ಪಟ ಅಭಿಮಾನಿಯೊಬ್ಬರು ಇದೀಗ ದೇವರಿಗೆ ಮೊರೆ ಹೋಗಿದ್ದಲ್ಲದೇ ಹತ್ತು ಕಿ.ಮೀ. ವರೆಗೂ ದೀರ್ಘದಂಡ ನಮಸ್ಕಾರದ ಹರಿಕೆ ತೀರಿಸಲು ಮುಂದಾಗಿದ್ದಾರೆ.

ಹೌದು, ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಈ ಕಳಂಕದಿAದ ಅವರ ಹೊರಬರಬೇಕು ಎಂದು ವಿಜಯಪುರ ಜಿಲ್ಲೆಯ ಯರನಾಳ ಗ್ರಾಮದ ಸಿದ್ದು ಅಭಿಮಾನಿ ಶ್ರೀಶೈಲ ವಾಲಿಕಾರ ಎನ್ನುವವರು ಜಗಜ್ಯೋತಿ ಅಣ್ಣ ಬಸವಣ್ಣನ ಐಕ್ಯ ಮಂಟಪ ಇರುವ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ದೀಡ ನಮಸ್ಕಾರ ಹಾಕುತ್ತಿದ್ದಾರೆ.

ಸಂಗಮ ಕ್ರಾಸ್‌ನಿಂದ ಕೂಡಲಸಂಗಮ ಕ್ಷೇತ್ರದ ವರೆಗೂ ಇರುವ ೧೦ ಕಿ.ಮೀ. ದೂರದ ವರೆಗೂ ದೀಡ ನಮಸ್ಕಾರ ಹಾಕುತ್ತಿದ್ದಾರೆ. ಸೋಮವಾರದಿಂದಲೇ ಈ ಹರಿಕೆ ತೀರಿಸುತ್ತಿದ್ದು, ಒಂದು ವಾರದ ವರೆಗೂ ಅವರು ದೀಡ ನಮಸ್ಕಾರ ಹಾಕಲಿದ್ದಾರೆ. ಪ್ರತಿ ದಿನ ಒಂದು ಕಿ.ಮೀ. ವರೆಗೂ ದೀಡ ನಮಸ್ಕಾರ ಹಾಕಿ ಕೊನೆಗೆ ಕೂಡಲಸಂಗಮ ಕ್ಷೇತ್ರದ ಅಽಪತಿ ಸಂಗಮನಾಥ ದೇಗುಲ ಹಾಗೂ ಅಣ್ಣ ಬಸವಣ್ಣನ ಐಕ್ಯಮಂಟಪದಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ಸಿದ್ದರಾಮಯ್ಯ ಅಭಿಮಾನಿ ಆಗಿರುವ ಶ್ರೀಶೈಲ ಅವರು ದೀಡ ನಮಸ್ಕಾರ ಹಾಕಲು ಮೈಮೇಲೆ ಹಸ್ತ ಗುರುತಿನ ಬಟ್ಟೆ, ಕಾಂಗ್ರೆಸ್ ಶಾಲು ಧರಿಸಿ ದೀಡ ನಮಸ್ಕಾರ ಹಾಕುತ್ತ ಹೊರಟಿದ್ದಾರೆ. ಅವರೊಂದಿಗೆ ಇರುವ ಜನರು ಕೈಯಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರ ಹಿಡಿದುಕೊಂಡು ಅವರೊಂದಿಗೆ ಹೊರಟಿದ್ದಾರೆ.