ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್‌ಗಳನ್ನು ಪ್ರಾಧಿಕಾರಕ್ಕೆ ಹಿಂತಿರುಗಿಸುವ ಮೂಲಕ ಆರೋಪಿ ಸ್ಥಾನದಲ್ಲಿ ಇರುವ ಸಿದ್ದರಾಮಯ್ಯ ತಪ್ಪಿಸ್ಥನೆಂದು ತೀರ್ಪು ಬರೆದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತ್ಯಹರಿಶ್ಚಂದ್ರನ ನಂತರ ಈ ದೇಶದಲ್ಲಿ ಯಾರಾದರೂ ಇದ್ದರೆ ಅದು ನಾನೇ. ನಾನು ಯಾವುದೇ ತಪ್ಪು ಮಾಡಿಲ್ಲವೆಂಬಂತೆ ವರ್ತಿಸುತ್ತಿದ್ದ ಸಿದ್ದರಾಮಯ್ಯ, ತಮ್ಮ ಪಟಾಲಂ ಮಾತು ಕೇಳಿ ಮೊಣಕಾಲುದ್ದ ಮುಳುಗಿದ್ದರು. ಕೋರ್ಟ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು, ಲೋಕಾಯುಕ್ತ ಎಫ್‌ಐಆರ್‌ಆರ್, ಇಡಿ ಇಸಿಆರ್ ದಾಖಲಿಸಿದ ಬಳಿಕ ಅವರು ಈಗ ಮೂಗಿನವರೆಗೆ ಮುಳುಗಿದ್ದಾರೆ ಎಂದರು.
ಸಿಬಿಐ ತನಿಖೆಗೂ ಕೋರ್ಟ್ ಆದೇಶಿಸಬಹುದಾಗಿದ್ದು, ಯಾವುದೇ ತಪ್ಪು ಮಾಡಿಲ್ಲ, ಹರಿಶ್ಚಂದ್ರನ ವಂಶಸ್ಥನಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ನ್ಯಾಯಯುತ ತನಿಖೆಗೆ ಸಹಕರಿಸಲಿ. ಭ್ರಷ್ಟಾಚಾರ, ಪ್ರಭಾವ ಬಳಸಿ ಪಡೆದ ನಿವೇಶನವನ್ನು ಪತ್ನಿ ಮೂಲಕ ಹಿಂತಿರುಗಿಸುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ಹೇಳಿದರು.
ಹಗರಣದ ಪುರಾವೆಗಳೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಲುಕಿದ್ದರೂ 65 ಕೋಟಿ ರೂ. ಯಾರ‌್ರೀ ಕೊಡುತ್ತಾರೆ. ನಾನು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲವೆಂದು ದೊಡ್ಡ ಮಾತುಗಳನ್ನಾಡುತ್ತಿದ್ದ ಸಿದ್ದರಾಮಯ್ಯ, ಅವಿವೇಕಿ ಮಂತ್ರಿಗಳ ಸಲಹೆಯಂತೆ ವರ್ತಿಸುತ್ತಾ ಗುಂಡಿಗೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿಬಿಐ ತನಿಖೆಗೆ ಅಡ್ಡಿ, ರಾಜ್ಯಪಾಲರಿಗೆ ಪತ್ರಕ್ಕೆ ಉತ್ತರಿಸಲು ನಿರಾಕರಿಸುವ ಕೆಲಸ ಮಾಡಿದ್ದಾರೆ. 2013ರಿಂದ 18ರ ವರೆಗಿನ ಅನೇಕ ಹಗರಣ ಮುಚ್ಚಿಹಾಕಲು ಲೋಕಾಯುಕ್ತವನ್ನೇ ಸಿದ್ದರಾಮಯ್ಯ ಬಂದ್ ಮಾಡಿಸಿದ್ದರು. 14 ಸೈಟ್‌ಗಳೊಂದಿಗೆ ಮುಡಾದ 4000 ನಿವೇಶನ ಹಂಚಿಕೆ ತನಿಖೆಯೂ ಆಗಬೇಕಿದೆ. ತಾವು ಪ್ರತಿಪಕ್ಷ ನಾಯಕರಾಗಿದ್ದಾಗ ತಾವು ಆಡಿದ್ದ ಮಾತು ಒಮ್ಮೆ ಅವಲೋಕಿಸಿ, ರಾಜೀನಾಮೆ ಕೊಡಲಿ ಎಂದರು.
ಕೆ. ಮಲ್ಲಿಕಾರ್ಜುನ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ ಇದ್ದರು.