ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತ ಪುಸ್ತಕ ಬಿಡುಗಡೆಗೆ ತಡೆ ತಂದಿರುವುದು ಅರ್ಥವಾಗದ ನಡೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಗಡೆ ಏನು ಇದೆ ಅಂತ ನೋಡದೆ ಸ್ಟೇ ತರುವುದರಲ್ಲಿ ಅರ್ಥ ಇಲ್ಲ. ಸಿದ್ದರಾಮಯ್ಯ ಮೋಸ್ಟ್ ಡೆಮಾಕ್ರಟಿಕ್ ಲೀಡರ್. ಯಾಕೆ ಈ ಕೆಲಸ ಮಾಡಿದರೋ ಗೊತ್ತಿಲ್ಲ. ನಮ್ಮ ಸರಸ್ವತಿ ಬಗ್ಗೆ ಕೆಟ್ಟದಾಗಿ ಬರೆದಾಗ, ಗಣಪತಿ ವಿಗ್ರಹವನ್ನು ಕೆಟ್ಟದಾಗಿ ಚಿತ್ರಿಸಿದಾಗ ಅವರು ಸ್ವತಂತ್ರರು ಹೆಂಗೆ ಬೇಕಾದರೂ ಬರೆದುಕೊಳ್ಳಬಹುದು ಎಂದು ಅವರೇ ಬೇಕಾದಷ್ಟು ಸಾರಿ ಹೇಳಿದ್ದಾರೆ. ಆದರೀಗ ಪುಸ್ತಕ ಬಿಡುಗಡೆಗೂ ಮುಂಚೆ, ಅದರಲ್ಲಿ ಏನಿದೆ ಎಂಬುದನ್ನು ನೋಡುವ ಮುಂಚೆಯೇ ಸ್ಟೇ ಏಕೆ ತಂದರೋ ಗೊತ್ತಿಲ್ಲ ಎಂದು ನುಡಿದರು.
ಯಾರಿಗೆ ಗೊತ್ತು?
ಸ್ಯಾಂಟ್ರೋ ರವಿ ಜೊತೆ ಬಿಜೆಪಿ ಸಚಿವರ ಸಂಪರ್ಕ ವಿಚಾರವಾಗಿ ಮಾತನಾಡಿ, ಪರಿಚಯ ಇಲ್ಲದಿದ್ದರೂ, ಜೊತೆಯಲ್ಲಿ ಯಾರು, ಯಾವಾ ಫೋಟೋ ತೆಗೆಸಿಕೊಂಡಿರುತ್ತಾರೋ ಗೊತ್ತಿಲ್ಲ. ನಾನು ಇಲ್ಲಿಗೆ ಬಂದು ಹೋಗುವಷ್ಟರಲ್ಲಿ ನೂರು ಫೋಟೋ ಆಗಿವೆ. ಯಾರು ಕ್ಲಿಕ್ಕಿಸಿದ್ದಾರೆ ಯಾರಿಗೆ ಗೊತ್ತು ಎಂದು ಮರುಪ್ರಶ್ನೆ ಹಾಕಿದರು.
ಸ್ಯಾಂಟ್ರೋ ರವಿ ಇವತ್ತು ವಿಧಾನಸೌಧಕ್ಕೆ ಬಂದವನಲ್ಲ ಎನ್ನುವ ಮಾತು ಇದೆ. ಅವನಿಗೆ ವಿಧಾನಸೌಧ, ಕುಮಾರಕೃಪಾ ಹೊಸದಲ್ಲ, ಅಷ್ಟೇ ಏಕೆ ಮಿನಿಸ್ಟರ್‌ಗಳೂ ಹೊಸಬರಲ್ಲ. ಯಾರು ಮಿನಿಸ್ಟರ್ ಆಗ್ತಾರೋ, ಅವರು ಯಾವ ಪಕ್ಷದವರೇ ಇರಲಿ, ಅವರ ಜೊತೆ ಇರ್ತಾನೆ ಅನ್ನೋ ಮಾತುಗಳೂ ಇವೆ. ಆದರೆ ಅವನ ಇತಿಹಾಸದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಸರ್ಕಾರ ಯಾವುದೇ ಅಪರಾಧಿಯನ್ನು ಸೇವ್ ಮಾಡುವಂತಹ ಸರ್ಕಾರ ಅಲ್ಲ ಎಂದು ಹೇಳಿದರು.
ಕೋಲಾರದಿಂದ ಸ್ಪರ್ಧಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ದೇಶ ಪ್ರತಿ ವ್ಯಕ್ತಿಗೆ ಕೊಟ್ಟಿರುವ ಸ್ವಾತಂತ್ರ್ಯ ಅದು. ಕೋಲಾರದಲ್ಲೂ ಸ್ಪರ್ಧೆ ಮಾಡಬಹುದು, ನಾಳೆ ಹಾಸನ, ಹೊಳೆನರಸೀಪುರದಲ್ಲೂ ಸ್ಪರ್ಧೆ ಮಾಡಬಹುದು. ಆ ಅಧಿಕಾರವನ್ನು ಅವರು ಉಪಯೋಗಿಸಿಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.