ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರ್ಕಾರದ ಪ್ರಾಯೋಜಿತ ದುಷ್ಕೃತ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದರು.
ಮೊಟ್ಟೆ ತೂರಿರುವುದು ಕೇವಲ ಸಿದ್ದರಾಮಯ್ಯ ಅವರಿಗೆ ಆದ ಅಪಮಾನವಲ್ಲ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ದೊಡ್ಡ ಹಾನಿ. ಹೀಗಾಗಿ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಅವರನ್ನು ರಾಜ್ಯಪಾಲರೇ ವಜಾ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಅವರ ಕಾರಿನ ಮೊಟ್ಟೆ ಎಸೆದು, ಕಪ್ಪುಬಾವುಟ ಪ್ರದರ್ಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಇದೇ ರೀತಿ ಐದು ಕಡೆ ವ್ಯವಸ್ಥಿತವಾಗಿ ದಾಳಿ ನಡೆದರೂ ಇದನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಿಲ್ಲ. ಸರ್ಕಾರಕ್ಕೆ ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ದೂರಿದರು.
ಕೊಡಗು ವೀರರ ನಾಡು. ಪ್ರತಿ ಮನೆಯಲ್ಲೂ ಸೈನಿಕರಿದ್ದಾರೆ. ಆದರೆ, ಅಂಥ ವೀರ ಸಂಸ್ಕೃತಿಗೆ ಧಕ್ಕೆ ತರುವ ಹೇಡಿ ಕೃತ್ಯವನ್ನು ಬಿಜೆಪಿ ಪುಂಡರು ಮಾಡಿದ್ದಾರೆ. ಕೊಡಗಿನ ಪ್ರತಿ ಮನೆಯಲ್ಲೂ ಪುಂಡರನ್ನು ಹುಟ್ಟುಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಶಾಂತಿಪ್ರಿಯರ ನಾಡು. ಆದರೆ, ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ, ಕೊಲೆ, ಸುಲಿಗೆ ಹೆಚ್ಚಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಗೃಹ ಸಚಿವರು ವಿಫಲವಾಗಿದ್ದಾರೆ. ತಮ್ಮ ಸ್ವಂತ ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದವರಿಗೆ ಬೇರೆ ಜಿಲ್ಲೆಗಳಲ್ಲಿ ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಅಭಿವೃದ್ಧಿ ಶೂನ್ಯ
ಕೊಡಗು ಜಿಲ್ಲೆಯಲ್ಲಿ 2018ರಿಂದಲೂ ಹೆಚ್ಚು ಮಳೆಯಾಗುತ್ತಿದ್ದು, ಹಾನಿಯೂ ಹೆಚ್ಚಾಗಿದೆ. ಸೂಕ್ತ ಅನುದಾನ ನೀಡಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ ಕೊನೇ ಸ್ಥಾನದಲ್ಲಿದ್ದರೆ, ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಕೊಟ್ಟ 600 ಭರವಸೆಗಳಲ್ಲಿ ಶೇ.9ರಷ್ಟನ್ನು ಮಾತ್ರ ಈಡೇರಿಸಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರ್.ಧ್ರುವನಾರಾಯಣ ದೂರಿದರು.
ಚುನಾವಣೆ ಬಳಿಕ ಬಿಎಸ್‌ವೈ ಮನೆಗೆ:
ಸಿದ್ದರಾಮೋತ್ಸವದ ಯಶಸ್ಸಿನಿಂದ ಬಿಜೆಪಿ ಬೆಚ್ಚಿಬಿದ್ದಿದೆ. ಈ ಕಾರಣಕ್ಕಾಗಿಯೇ ಮೂಲೆ ಗುಂಪಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಪಕ್ಷದ ನಾಯಕರನ್ನು ಯೂಸ್ ಆ್ಯಂಡ್ ಥ್ರೋ ರೀತಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪ ಅವರನ್ನು ಮತ್ತೆ ಮನೆಗೆ ಕಳುಹಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಟೀಕಿಸಿದರು.
26ಕ್ಕೆ ಕೊಡಗು ಚಲೋ:
ಸಿದ್ದರಾಮಯ್ಯ ಅವರ ಮೇಲಿನ ದಾಳಿ, ಪೊಲೀಸರ ವೈಫಲ್ಯ ಖಂಡಿಸಿ ಆ.26ರಂದು ಕೊಡಗು ಚಲೋ ನಡೆಸಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದು, ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿಯಂತೆ ಹೇಡಿಗಳ ಕೃತ್ಯ ಮಾಡಲ್ಲ ಎಂದು ತಿಳಿಸಿದರು.
ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಒಬಿಸಿ ಘಟಕದ ಅಧ್ಯಕ್ಷ ಮಾರುತಿ ಇದ್ದರು.
ಇದು ಹೇಡಿಗಳು ಮಾಡುವ ಕೃತ್ಯ. ಸೈದ್ಧಾಂತಿಕ ಹೋರಾಟಕ್ಕೆ ಹಿಂಸಾತ್ಮಕ ರೂಪ ನೀಡಿರುವುದು ಖಂಡನೀಯ. ಇದು ಬಿಜೆಪಿಯಯವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ. ಘಟನೆ ಹಿಂದೆ ಸರ್ಕಾರದ ಕುಮ್ಮಕ್ಕಿದ್ದು, ಇಂಥ ಬೆದರಿಕೆಗಳಿಗೆ ಸಿದ್ದರಾಮಯ್ಯ ಹೆದರುವುದಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕರಿಗೆ ಭದ್ರತೆ ಇಲ್ಲ. ಇನ್ನೂ ಜನರಿಗೆ ಯಾವ ರೀತಿಯ ಭದ್ರತೆಯನ್ನು ಈ ಸರ್ಕಾರ ನೀಡುತ್ತದೆ?ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕ