ಜಿಲ್ಲೆ

ಸಿದ್ದರಾಮಯ್ಯ ಉತ್ಸವದಿಂದ ಬಿಜೆಪಿ ತಲ್ಲಣ: ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಯಶಸ್ಸಿನಿಂದ ಬಿಜೆಪಿ ತಲ್ಲಣಗೊಂಡಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದ ಯಶಸ್ಸಿನಿಂದ ಬಿಜೆಪಿಗೆ ಉರಿ ಶುರುವಾಗಿದೆ. ನೀರಿಕ್ಷೆಗೂ ಮೀರಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ದುಡ್ಡು ಕೊಟ್ಟರೂ ಅಷ್ಟು ಜನ ಬರಲು ಸಾಧ್ಯವಿಲ್ಲ. ದುಡ್ಡು ಕೊಟ್ಟು ಜನರನ್ನು ಕರೆಸಿದರೆ ಅರ್ಧ ಗಂಟೆಯಲ್ಲಿ ವಾಪಸ್ ಹೋಗುತ್ತಾರೆ. ಈ ಕಾರ್ಯಕ್ರಮ ಆ ರೀತಿ ಆಗಲಿಲ್ಲ. 15 ಲಕ್ಷಕ್ಕೂ ಹೆಚ್ಚು ಜನ ಯಾವ ನಿರೀಕ್ಷೆಯೂ ಇಲ್ಲದೆ ಬಂದರು. ಇದೊಂದು ಚಾರಿತ್ರಿಕ ಕಾರ್ಯಕ್ರಮ ಎಂದು ಬಣ್ಣಿಸಿದರು.

ಬಿಜೆಪಿ ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದೆ. ನಾವು ಮತ್ತೆ ಸ್ಪಷ್ಟಪಡಿಸುತ್ತೇವೆ, ಇದು ಸಿದ್ದರಾಮೋತ್ಸವ ಅಲ್ಲ. ಸಿದ್ದರಾಮಯ್ಯ ಅವರ ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿಕೊಂಡು ಮಾಡಿದ ಅಮೃತ ಮಹೋತ್ಸವ ಎಂದರು.
ಈ ಕಾರ್ಯಕ್ರಮದ ಯಶಸ್ಸಿನಿಂದ ಕಾಂಗ್ರೆಸ್ ಮೈಮರೆಯಬಾರದು. ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿಯ ಹರ ಘರ್ ತಿರಂಗಾ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯದ ಆಶಯಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅವರಿಗೆ ಬೇಕಾಗಿರುವುದು ಸರ್ವಾಧಿಕಾರತ್ವ ಮಾತ್ರ. ಒಂದು ಧರ್ಮ, ಒಂದು ಭಾಷೆ, ಒಬ್ಬರದ್ದೇ ಆಡಳಿತ ಎಂಬುದು ಬಿಜೆಪಿ ನಿಲುವು. ಇಂತಹವರಿಂದ ಸ್ವಾತಂತ್ರ್ಯದ ಆಶಯ ಈಡೇರಲು ಸಾಧ್ಯವಿಲ್ಲ ಎಂದು ಜರಿದರು.

ರಾಷ್ಟ್ರಧ್ವಜ ತಯಾರಿಗೆ ತನ್ನದೇ ಆದ ನಿಯಮ ಮತ್ತು ಕ್ರಮ ಇದೆ. ಅದನ್ನೆಲ್ಲ ಬಿಜೆಪಿ ಮುರಿದು ಬಾವುಟವನ್ನು ಅವಮಾನಿಸುತ್ತಿದೆ ಎಂದು ಟೀಕಿಸಿದರು.