ಜಿಲ್ಲೆ

ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ : ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಯಾವುದೂ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್ ಜಾರಕಿಹೊಳಿ ಅವರಿಗಿದೆ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಲೂ ನನ್ನ ಮಾತಿಗೆ ನಾನು ಬದ್ಧ. ನನ್ನ ಮಾತಿಗೆ ಸ್ಪಷ್ಟೀಕರಣ ಕೂಡ ಕೊಟ್ಟಿದ್ದೇನೆ ಎಂದರು.

ನಾನು ಏನು ಹೇಳಬೇಕೋ ಹೇಳಿದ್ದಾಗಿದೆ. ಅನಗತ್ಯವಾಗಿ ಮತ್ತೆ ಅದನ್ನೇ ಮಾತನಾಡಿ ವಿವಾದ ಸೃಷ್ಟಿ ಮಾಡಲ್ಲ. ನನ್ನ ಹೇಳಿಕೆ ವಿವಾದ ಪಡೆದ ಕ್ಷಣವೇ ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಈ ವಿಚಾರದ ಬಗ್ಗೆ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡ್ತೀನಿ. ಪಕ್ಷದ ಆತಂರಿಕ ವಿಚಾರಗಳನ್ನು ಪಕ್ಷದ ಒಳಗೆ ಮಾತಾಡುತ್ತೇನೆ. ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಪಕ್ಷದಿಂದ ನೋಟಿಸ್ ಬಂದಾಗ ನೋಡಿಕೊಳ್ಳೋಣ ಎಂದು ಉತ್ತರಿಸಿದರು.

ನಾನು ಅವತ್ತು ಬೆಳಗಾವಿಯಲ್ಲಿ ಹೇಳಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನವೆಂಬರ್ ಕ್ರಾಂತಿ ಕೇವಲ ಉಹಾಪೋಹ ಅಷ್ಟೆ. ಇಂದಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರೈಸುತ್ತಾರೆ ಎಂದು ಪುನರುಚ್ಚರಿಸಿದರು.