ಚಿಕ್ಕಮಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಗಲುಗನಸು ಕಾಣುತ್ತಿದ್ದು, ಸಿದ್ದರಾಮಯ್ಯ ಅವರ ಸ್ಟೈಲ್ನಲ್ಲೇ ಹೇಳಬೇಕೆಂದರೆ ಅಪ್ಪನಾಣೆ ಅವರು ಮುಖ್ಯಮಂತ್ರಿಗಳಾಗಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಿಂದ 2018ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅದನ್ನು ಅವರು ಉಳಿಸಿಕೊಳ್ಳಲಾಗಲಿಲ್ಲ. ಜೆಡಿಎಸ್-ಕಾಂಗ್ರೆಸ್ ಸೇರಿ ರಚನೆ ಮಾಡಿದ ಸಮ್ಮಿಶ್ರ ಸರ್ಕಾರವನ್ನೂ ಉಳಿಸಿಕೊಳ್ಳಲಿಲ್ಲ. ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಾಗಲಿಲ್ಲದವರು ಗಳಿಸಿಕೊಳ್ಳುವುದೆಲ್ಲಿಂದ ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಎಂದು ನಾನು ಬೋರ್ಡ್ ಹಾಕಿಕೊಂಡ ತಕ್ಷಣ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಫ್ಲೆಕ್ಸ್ ಹಾಕಿದಾಕ್ಷಣ ಮುಂದಿನ ಸಿಎಂ ಆಗುತ್ತಾರಾ? ಜನ ವೋಟು ಹಾಕೋದು ಬೇಡವಾ? ಜನ ಮೊದಲು ಆ ಪಕ್ಷಗಳಿಗೆ ಮತಹಾಕಿ ನಂತರ ಪಕ್ಷ ತೀರ್ವನಿಸಬೇಕು. ನಮ್ಮ ದೇಶದ ರಾಷ್ಟ್ರೀಯ ಇತಿಹಾಸವನ್ನು ಹತ್ತು ವರ್ಷಗಳಿಂದ ಅವಲೋಕನ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದಕ್ಕಿಂತ ಅಧಿಕಾರ ಕಳೆದುಕೊಂಡಿರುವುದೇ ಜಾಸ್ತಿ ಎಂದರು.ತನ್ನ ಮೇಲೆ ಆಪಾದನೆ ಬಂದಾಗ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಈಗ ಮುಖ್ಯಮಂತ್ರಿಗಳು ಪರಿಶೀಲಿಸಬೇಕು. ಪಕ್ಷವನ್ನು ಈ ಹಂತದಲ್ಲಿ ಕಟ್ಟಿ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು ಎಂದು ಸಿ.ಟಿ.ರವಿ ಹೇಳಿದರು.