ಜಿಲ್ಲೆ

ಸಿದ್ದಗಂಗಾ ರಥಕ್ಕೆ ಭವ್ಯ ಸ್ವಾಗತ

ಕಿಕ್ಕೇರಿ: ನಡೆದಾಡುವ ದೇವರಾಗಿದ್ದ ತುಮಕೂರಿನ ಸಿದ್ದಗಂಗಾ ಶಿವಕುಮಾರ ಶ್ರೀಗಳ ಸ್ಮರಣೆಯೇ ದೊಡ್ಡ ಸೌಭಾಗ್ಯ ಎಂದು ವೀರಶೈವ ಲಿಂಗಾಯತ ವೇದಿಕೆ ತಾಲೂಕು ಅಧ್ಯಕ್ಷ ಗುರುಮೂರ್ತಿ ಹೇಳಿದರು.

ಪಟ್ಟಣಕ್ಕೆ ಆಗಮಿಸಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಕ್ಷ ಪುಷ್ಪಾರ್ಚನೆ, ಬಿಲ್ವಾರ್ಚನೆ ಪ್ರಚಾರ ರಥವನ್ನು ಭಕ್ತರೊಂದಿಗೆ ಸ್ವಾಗತಿಸಿ ಅವರು ಮಾತನಾಡಿದರು. ಶ್ರೀಗಳು ಶ್ರೇಷ್ಠ ಜೀವನ ನಡೆಸಿ ವಿಶ್ವಮಾನವರಾದರು. ಅವರ ನೆನಪಿನಲ್ಲಿ ಸಿದ್ದಗಂಗಾ ಮಠದ ಗದ್ದುಗೆಯಲ್ಲಿ ನ.21ರಂದು ಕಾರ್ತಿಕ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಭಕ್ತರು ರಥಕ್ಕೆ ಪುಷ್ಪಾರ್ಚನೆ ಮಾಡಿ, ಆರತಿ ಬೆಳಗಿದರು. ಹೋಬಳಿಯ ಸಾಸಲು, ಗೋವಿಂದನಹಳ್ಳಿ, ಜಯಪುರ ಮತ್ತಿತರ ಗ್ರಾಮಗಳಲ್ಲಿ ಸಂಚರಿಸಿದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿದರು.

ವೀರಶೈವ ಲಿಂಗಾಯತ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ವಡ್ಡರಹಳ್ಳಿ ಮಂಜು, ಕಸಬಾ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಬ್ಯಾಂಕ್ ಪರಮೇಶ್ ಮತ್ತಿತರರಿದ್ದರು.