ಜಮಖಂಡಿ ತಾಲೂಕಿನ ಜಂಬಗಿ ಕೆಡಿ ಗ್ರಾಮದಲ್ಲಿ ಸಿಡಿಲು ಬಡಿದು ಅಪ್ಪು ಕುಮಟಗಿ ಅವರಿಗೆ ಸೇರಿದ ಆಕಳು ಸಾವನ್ನಪ್ಪಿದೆ. 
ಜಿಲ್ಲೆ

ಸಿಡಿಲು, ಮಿಂಚುಗಳ ಅಬ್ಬರದೊಂದಿಗೆ ವರುಣಾರ್ಭಟ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಸಿಡಿಲು, ಮಿಂಚುಗಳ ಜೊತೆಗೆ ಧಾರಾಕಾರ ಮಳೆ ಆಗಿದೆ. ಮಳೆ ಅಬ್ಬರದಿಂದ ಅನೇಕ ಹಳ್ಳಗಳು ತುಂಬಿ ಹರಿದಿದ್ದು, ಕೆಲವು ಕಡೆಗಳಲ್ಲಿ ಇಡೀ ರಾತ್ರಿ ಮಳೆ ಸುರಿದಿದೆ.

ಸಿಡಿಲಿನ ಅಬ್ಬರವೂ ಜೋರಾಗಿದ್ದರಿಂದ ಜಮಖಂಡಿ ತಾಲೂಕಿನ ಜಂಬಗಿ ಕೆಡಿ ಗ್ರಾಮದಲ್ಲಿ ಸಿಡಿಲು ಬಡಿದು ಅಪ್ಪು ಕುಮಟಗಿ ಅವರಿಗೆ ಸೇರಿದ ಆಕಳು ಸಾವನ್ನಪ್ಪಿದೆ. ಹುನಗುಂದ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದ್ದು, ರಸ್ತೆಯನ್ನು ಆವರಿಸಿದೆ. ಇದರಿಂದ ಬೇಕಮಲದಿನ್ನಿ, ಕರಡಿ, ರಾಮವಾಡಗಿ, ಚಿಂತಕಮಲದಿನ್ನಿ, ಜಾಕಲಮದಿನ್ನಿ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ ಕಡಿತವಾಗಿತ್ತು. ಹಳ್ಳದಲ್ಲಿ ಭಾರಿ ನೀರು ಹರಿದು ಹೋಗುತ್ತಿದ್ದರಿಂದ ಶನಿವಾರ ಬೆಳಗ್ಗೆ ವಾಹನ ಸಂಚರ್ ಬಂದ್ ಆಗಿತ್ತು.

ಮಳೆ ಅಬ್ಬರದಿಂದ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದ ಅಂಕಲಿಮಠ ರಸ್ತೆಯ ನಿವಾಸಿಗಳಿಗೆ ಹಬ್ಬದ ಸಂಭ್ರಮವನ್ನು ಕಸಿದಿತ್ತು. ಶನಿವಾರ ಬೆಳಗಿನ ಜಾವ ಅಬ್ಬರಿಸಿದ ಮಳೆಯಿಂದಾಗಿ ಬೆಳಗ್ಗೆ ಮನೆ ಅಂಗಳಗಳೆಲ್ಲ ಕೆರೆಯಂತಾಗಿತ್ತು. ಮನೆಗಳು ಮುಂದೆ ಎರಡು ಅಡಿಗಿಂತಲೂ ಹೆಚ್ಚಿನ ನೀರು ನಿಂತಿತ್ತು. ಇದರಿಂದ ವಿಜಯದಶಮಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ ತಂದಿತ್ತು.

ಇನ್ನು ಜಿಲ್ಲಾದ್ಯಂತವೂ ಮಳೆ ಅಬ್ಬರ ನಡೆದಿದ್ದು, ಶುಕ್ರವಾರ ತಡರಾತ್ರಿ ಮಿಂಚು, ಗುಡುಗುಗಳ ಜೊತೆ ಆರಂಭವಾಗಿ ಮಳೆ ಎರಡು ಗಂಟೆಯ ಬಳಿಕ ಮಿಂಚು ಗುಡುಗು ಇಲ್ಲದೇ ಧಾರಾಕಾರವಾಗಿ ಸುರಿದು, ಶನಿವಾರ ನಸುಕಿನ ಜಾವದವರೆಗೂ ಮುಂದುವರೆಯಿತ್ತು. ಜಿಲ್ಲೆಯಲ್ಲಿ ಅ. ೧೧ ರಿಂದ ಅ. ೧೨ ರ ಬೆಳಗಿನ ವರೆಗೂ ವಾಡಿಕೆ ಮಳೆ ೨.೭ಎಂಎಂ ಇದ್ದು, ಒಟ್ಟು ೨೮.೭ಎಂಎಂ ಮಳೆ ಆಗಿರುವ ವರದಿಯಾಗಿದೆ.

ಹಿಂಗಾರು ಬಿತ್ತನೆ ಆರಂಭವಾಗಿದ್ದರಿಂದ ಕೃಷಿ ಬೆಳೆಗಳಿಗೆ ಅಂತಹ ತೊಂದರೆ ಏನು ಆಗಿಲ್ಲ. ಆದರೆ, ಕೆಲವು ಭಾಗಗಳಲ್ಲಿ ಕಟಾವು ಮಾಡಿ ಜಮೀನಿನಲ್ಲಿ ಒಣಗಲು ಬಿಟ್ಟಿದ್ದ ಈರುಳ್ಳಿ ಬೆಳೆ ಹಾನಿಗೆ ಒಳಗಾಗಿದೆ, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಶ್ರೀಕಾಂತ ಹಾಗೂ ಬಸವರಾಜ್ ಸಹೋದರರ ಎರಡು ಎಕರೆ ಕಬ್ಬು ಬೆಳೆ ಧರೆಗುರುಳಿದೆ. ಮಳೆಯಿಂದ ಹಾನಿ ಆಗಿರುವ ಈರುಳ್ಳಿ ಬೆಳೆಗಳ ಬಗ್ಗೆ ಸರ್ವೆ ಆಗಬೇಕಿದೆ.