ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನಾಲ್ಕು ಗಂಟೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.
ಅರ್ಧ ತಾಸಿಗೂ ಹೆಚ್ಚು ಧಾರಾಕಾರ ಮಳೆಯಾಗಿದೆ. ಮಂಗಳವಾರ ಸಾಧಾರಣ ಮಳೆಯಾಗಿತ್ತು. ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರು ಹಾಗೂ ತೋಟಗಳಿಗೆ ಮಳೆ ತಂಪು ನೀಡಿದೆ. ರಂಭಾಪುರಿ ಪೀಠದ ಸಮೀಪದ ಮೆಣಸುಕೊಡಿಗೆಯಲ್ಲಿ ಸಂಜೆ ವರ್ಷಧಾರೆಯಾಗಿದ್ದು, ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.ಮಳೆ ಬರುತ್ತಿದ್ದಾಗ ಮಂಜುನಾಥ ಎಂಬುವರ ಮನೆ ಸಮೀಪದ ತೆಂಗಿನಮರಕ್ಕೆ ಸಿಡಿಲು ಬಡಿದಿದ್ದು, ಸಿಡಿಲಿನ ತೀವ್ರತೆಗೆ ಮನೆಯ ಟೈಲ್ಸ್ಗಳು ಒಡೆದು ಚೂರಾಗಿವೆ. ಜತೆಗೆ ಮನೆಯ ಎಲ್ಲ ವಿದ್ಯುತ್ ವೈರ್‌ಗಳು, ಬ್ಯಾಟರಿ ಇನ್ವರ್ಟರ್ ಸುಟ್ಟು ಕರಕಲಾಗಿವೆ. ಅದೃಷ್ಟವಶಾರ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ಮಳೆ ಉತ್ತಮವಾಗಿ ಸುರಿದ ಬಳಿಕ ಕಾಫಿ, ಅಡಕೆ ಬೆಳೆಗಾರರು ತೋಟಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಿದ್ದಾರೆ. ಇನ್ನೂ ಒಂದೆರಡು ದಿನ ಮಳೆ ಬಂದಲ್ಲಿ ಬೆಳೆಗಳಿಗೆ ನೀರು ಹಾಯಿಸುವುದು ಸ್ಥಗಿತವಾಗಿ ಡೀಸೆಲ್, ವಿದ್ಯುತ್, ಹಣ ಉಳಿತಾಯವಾಗಲಿದೆ.