ಹನೂರು: ಸಿಡಿಮದ್ದು ಸಿಡಿದು ಜಾನುವಾರುಗಳು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾಮಾಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಾರಾಯಣಸ್ವಾಮಿ, ಶಿವಣ್ಣ, ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಶ್ರೀರಂಗಶೆಟ್ಟಿ ಹಾಗೂ ಚಿಕ್ಕಲತ್ತೂರು ಗ್ರಾಮದ ಜಡೇಯಪ್ಪ, ಈತನ ಪುತ್ರ ರುದ್ರ ಬಂಧಿತರು. ಹನೂರು ಸೇರಿದಂತೆ ಬೂದುಬಾಳು, ಕೌದಳ್ಳಿ ಹಾಗೂ ಇತರ ಗ್ರಾಮದ ಜಮೀನು ಹಾಗೂ ಮಾಳದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಕಿಡಿಗೇಡಿಗಳು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಸಿಡಿಮದ್ದನ್ನು ಅಡಗಿಸಿಡುತ್ತಿದ್ದರು. ಜಾನುವಾರುಗಳು ಮೇಯಲು ಬಾಯಿ ಹಾಕಿದಾಗ ಸಿಡಿಮದ್ದು ಸಿಡಿದು ಬಾಯಿ ಛಿದ್ರಗೊಂಡು ಮೃತಪಟ್ಟಿದ್ದವು.
ಪೊಲೀಸರು ಫೆ.25 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಆದರೂ ಬೂದುಬಾಳು ಹಾಗೂ ಕೌದಳ್ಳಿಯಲ್ಲಿ ಇತ್ತೀಚೆಗೆ ಸಿಡಿಮದ್ದು ಸಿಡಿದು ಹಸುಗಳ ಮೃತಪಟ್ಟಿದ್ದವು. ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದರು. ಜತೆಗೆ ಕೌದಳ್ಳಿಯಲ್ಲಿ ಸಿಡಿಮದ್ದು ಸ್ಫೋಟ ಕಡಿವಾಣ ಸಂಬಂಧ ಮಾ.2 ರಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಸಭೆ ನಡೆಸಲಾಗಿತ್ತು. ಇದೇ ದಿನ ಕೌದಳ್ಳಿ ಗ್ರಾಮದಲ್ಲೇ ಸಿಡಿಮದ್ದು ಸಿಡಿತಕ್ಕೆ ಹಸುವಿನ ಬಾಯಿ ಛಿದ್ರವಾಗಿತ್ತು. ತೆಳ್ಳನೂರು ಗ್ರಾಮದಲ್ಲಿ ಕರಡಿಯೊಂದು ಮೃತಪಟ್ಟಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದರು. ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡ ರಾಮಾಪುರ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ, ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ತಂಡ ಶ್ರೀರಂಗಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ನೀಡಿದ್ದಾನೆ. ನಾರಾಯಣಸ್ವಾಮಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಸಂಗ್ರಹಿಸಿದ್ದ 43 ಸಿಡಿಮದ್ದನ್ನು ವಶಕ್ಕೆ ಪಡೆದು ಪ್ರಕರಣದಲ್ಲಿ ಭಾಗಿಯಾಗದ್ದ ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.