ಜಿಲ್ಲೆ

ಸಿಡಿಪಿಒ ಕಚೇರಿಗೆ ತನಿಖಾಧಿಕಾರಿಗಳ ತಂಡ ಭೇಟಿ

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಅಂದಿನ ಸಿಡಿಪಿಒ ನಂಜಮಣಿ ನಿಯಮಬಾಹಿರವಾಗಿ ಮೊಟ್ಟೆ ಹಣವನ್ನು ಹಂಚಿಕೆ ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ನೇತೃತ್ವದ ತನಿಖಾಧಿಕಾರಿಗಳ ತಂಡ ಗುರುವಾರ ಪಟ್ಟಣದ ಸಿಡಿಪಿಒ ಕಚೇರಿಗೆ ಭೇಟಿ ನೀಡಿ ತನಿಖೆ ಆರಂಭಿಸಿತು.

ಪ್ರಕಣದ ಕುರಿತು ಅಂಗನವಾಡಿ ಕಾರ್ಯಕರ್ತೆ ಸುಂದ್ರಮ್ಮ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದರು. ಅಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಿದ್ದು, ಮೈಸೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು ಅವರನ್ನು ಸಮಿತಿ ಅಧ್ಯಕ್ಷರಾಗಿ, ಮಂಡ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಆಶಾ ಅವರನ್ನು ಸದಸ್ಯರಾಗಿ, ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮೊಕ್ತರ್ ಅವರನ್ನು ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಿ ಏ.3 ರಂದು ಆದೇಶಿಸಿದ್ದರು.

ಸಮಗ್ರ ತನಿಖೆ ಕೈಗೊಂಡು ಸ್ಪಷ್ಟ ಅಭಿಪ್ರಾಯ ಹಾಗೂ ದಾಖಲೆಯೊಡನೆ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಅದರಂತೆ ಈ ಮೂವರು ಅಧಿಕಾರಿಗಳ ತಂಡ ಪಟ್ಟಣದ ಸಿಡಿಪಿಒ ಕಚೇರಿಗೆ ಭೇಟಿ ನೀಡಿ ಮೊಟ್ಟೆ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.