ಜಿಲ್ಲೆ

ಸಿಡಿ ಪ್ರಕರಣ ಮೈಸೂರಿನಲ್ಲಿ ಪರ-ವಿರೋಧ ಪ್ರತಿಭಟನೆ

ನಗರದಲ್ಲಿ ಪರ-ವಿರೋಧ ಪ್ರತಿಭಟನೆ

  • ಕಾಂಗ್ರೆಸ್ ಕಾರ್ಯಕರ್ತರಿಂದ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ
  • ಡಿಕೆಶಿ ವಿರುದ್ಧ ಕೆಂಡಕಾರಿದ ಬಿಜೆಪಿ ಕಾರ್ಯಕರ್ತರು
    ಮೈಸೂರು: ಸಿಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ತಮ್ಮ ತಮ್ಮ ನಾಯಕನನ್ನು ಬೆಂಬಲಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿ, ಜಾರಕಿಹೊಳಿ ಅವರ ಬಂಧನಕ್ಕೆ ಆಗ್ರಹಿಸಿ ಮತ್ತು ಶಾಸಕ ಸ್ಥಾನ ಅನರ್ಹಗೊಳಿಸುವಂತೆ ಒತ್ತಾಯಿಸಿದರು.
    ಪ್ರಕರಣ ಬೆಳಕಿಗೆ ಬಂದು 24 ದಿನವಾದರೂ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಬಂಧನ ಆಗಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇಂದು ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇದೆಯಾ ಎನ್ನುವ ಪ್ರಶ್ನೆ ಬಂದಿದೆ. ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದೆ, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆ ನೀಡದೆಯೇ ಸ್ವೇಚ್ಛೆಯಾಗಿ ಬಿಟ್ಟಿದೆ. ಒಂದು ಮೊಕದ್ದಮೆ ದಾಖಲಾದ ಮೇಲೆ, ಎಫ್‌ಐಆರ್ ದಾಖಲಾದ ಮೇಲೆ ಬಂಧಿಸಬೇಕು. ನಮ್ಮ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಮೇಶ್ ಜಾರಕಿಹೊಳಿ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.
    ಇದು ಈ ನೆಲದ ಕಾನೂನಿಗೆ ಮಾಡಿದ ಅಪಚಾರ. ನಿಜವಾಗಲೂ ನೈತಿಕತೆ ಇಲ್ಲದ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಮಧ್ಯಪ್ರವೇಶಿಸಿ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕು. ಈ ಪ್ರಕರಣ ತೀರ್ಮಾನವಾಗುವವರೆಗೂ ಅವರಿಗೆ ಶಾಸಕ ಎಂದು ಹೇಳಿಕೊಳ್ಳಲು ಹಕ್ಕಿಲ್ಲ. ರಾಜ್ಯದ ಜನ ಇಷ್ಟೊಂದು ಕೂಗುತ್ತಿದ್ದರೂ ರಮೇಶ್ ಜಾರಕಿಹೊಳಿ ಮೇಲೆ ಕ್ರಮ ತೆಗೆದುಕೊಳ್ಳದ ಸರ್ಕಾರ ಭಂಡ ಸರ್ಕಾರ, ನೀತಿಗೆಟ್ಟ ಸರ್ಕಾರ. ರಾಜ್ಯಪಾಲರು ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್, ಕಾಂಗ್ರೆಸ್ ಕಾರ್ಯಕರ್ತರು, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಜಾರಕಿಹೊಳಿ ಬೆಂಬಲಿಗರಿಂದ ಡಿಕೆಶಿ ವಿರುದ್ಧ ಆಕ್ರೋಶ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾಯಕ ಜನಾಂಗದ ಮುಖಂಡರನ್ನು ರಾಜಕೀಯವಾಗಿ ತುಳಿಯಲು ಮುಂದಾಗಿದ್ದಾರೆ. ಆದ್ದರಿಂದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯುವತಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಯುವತಿಯನ್ನು ಬಚ್ಚಿಟ್ಟು ದಿನಕ್ಕೊಂದು ವಿಡಿಯೋವನ್ನು ಯುವತಿ ಕಡೆಯಿಂದ ಬಿಡುಗಡೆ ಮಾಡಿಸಿ, ರಾಜ್ಯದ ಜನರಲ್ಲಿ ರಮೇಶ್ ಜಾರಕಿಹೊಳಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಿರುವ ಡಿ.ಕೆ. ಶಿವಕುಮಾರ್ ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ನೈತಿಕತೆ ಕಳೆದುಕೊಂಡಿರುವುದರಿಂದ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯುವತಿಯ ತಂದೆ, ತಾಯಿ ಮತ್ತು ಸಹೋದರ ಮಾಧ್ಯಮಗಳ ಮೂಲಕ ಹಾಗೂ ಎಸ್‌ಐಟಿ ಮುಂದೆ ನಮ್ಮ ಮಗಳನ್ನು ಡಿ.ಕೆ.ಶಿವಕುಮಾರ್ ಬಚ್ಚಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಈ ಸಿಡಿ ಪ್ರಕರಣಕ್ಕೆ ಮೂಲ ಸೂತ್ರಧಾರ ಡಿ.ಕೆ.ಶಿವಕುಮಾರ್ ಎಂದು ಹೇಳಿರುವುದರಿಂದ ಅವರ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಾಯಕ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ.ಕಾಟೂರು, ಜಿಲ್ಲಾಧ್ಯಕ್ಷ ಉದ್ಬೂರು ಸೋಮಣ್ಣ, ರಾಜ್ಯ ಉಪಾಧ್ಯಕ್ಷ ಶಿವಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುತ್ತೂರು ಸುರೇಶ ನಾಯಕ ಇತರರಿದ್ದರು.