ಜಿಲ್ಲೆ

ಸಿಟಿಇ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ 6ರಿಂದ

ಪ್ರಶಾಂತ ಹೂಗಾರ

ಚಿಕ್ಕೋಡಿ: ಇಲ್ಲಿನ ಸಿಟಿಇ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ಅನ್ನೋತ್ಸವ-3.0 ಕಾರ್ಯಕ್ರಮ ಜ.6 ರಿಂದ 11ರ ವರೆಗೆ ಆಯೋಜಿಸಲಾಗಿದೆ ಎಂದು ಸಹ ಕಾರ್ಯದರ್ಶಿ ಮಿಥುನ ದೇಶಪಾಂಡೆ ಹೇಳಿದರು.

ಪಟ್ಟಣದ ಸಿಟಿಇ ಸಂಸ್ಥೆಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024-25ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಅನ್ನೋತ್ಸವ ಕಾರ್ಯಕ್ರಮ 6 ದಿನ ಆಚರಿಸಲು ನಿರ್ಧರಿಸಲಾಗಿದೆ. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು, ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಪ್ರತಿದಿನದ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಜ.6 ಮತ್ತು 7ರಂದು ಶ್ರೀಮತಿ ಡಿ.ಕೆ.ಶಹಾ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ, ಜ.6ರಿಂದ 9ರ ವರಗೆ ಇಂಟರ್‌ನ್ಯಾಶನಲ್ ಪಬ್ಲಿಕ್ (ಸಿಬಿಎಸ್‌ಇ) ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ, ಮನರಂಜನೆ ಕಾರ್ಯಕ್ರಮ ಜ.10ರಂದು ಆರ್.ಡಿ.ಪ್ರೌಢಶಾಲೆ ಮತ್ತು ಆರ್.ಎಂ.ಬಾಲಿಕಾ ಪ್ರೌಢಶಾಲೆಯಲ್ಲಿ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ ಜರುಗಲಿವೆ. ಜ.11ರಂದು ಅನ್ನೋತ್ಸವ-3.0 ಬೃಹತ್ ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ. ಇಲ್ಲಿ ವಿವಿಧ ಖಾದ್ಯಗಳ ಅಂದಾಜು 400 ಮಳಿಗೆಳನ್ನು ತೆರೆಯಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಟಿಇ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಉಪಾಧ್ಯಕ್ಷ.ವಿ.ಎಸ್.ಮಾಂಜರೇಕರ್, ಕಾರ್ಯದರ್ಶಿ ಎ.ಎಸ್. ಕುಲಕರ್ಣಿ, ಎಸ್.ಬಿ.ಕುಲಕರ್ಣಿ, ವಿ.ಪಿ.ಶೇಡಬಾಳ, ವೈ.ಎಸ್.ಮಿರ್ಜಿ, ಎಸ್.ವಿ.ಅಡಕೆ, ಎಸ್.ಎಸ್.ಕುಲಕರ್ಣಿ, ವಿ.ಸಿ.ಕುಲಕರ್ಣಿ, ಆಡಳಿತಾಧಿಕಾರಿ ಎಸ್.ಜಿ.ಜಹಾಗೀರದಾರ, ಸಹ ಕಾರ್ಯದರ್ಶಿ ಮಿಥುನ ದೇಶಪಾಂಡೆ ಇತರರಿದ್ದರು.