ಹಾಸನ: ಕಾನೂನಿಗೆ ವಿರುದ್ಧವಾಗಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಚುನಾವಣೆ ನಡೆಸಲಾಗುತ್ತಿದೆ ಎಂದು ಸಹಕಾರ ಸಂಘದ ಮಾಜಿ ಅಧ್ಯಕ್ಷ ದೇವರಾಜು ಆರೋಪ ಮಾಡಿದರು.
ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಚುನಾವಣೆ ಸೆ.3 ರಂದು ನಡೆಯಲಿದೆ. ಕೆಲವು ನ್ಯೂನ್ಯತೆಗಳನ್ನು ಸರಿಪಡಿಸದೆ ಚುನಾವಣೆ ನಡೆಸಲು ಸಂಘದ ಆಡಳಿತ ಮಂಡಳಿ ತಯಾರಿ ನಡೆಸಿದೆ. ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.
ಸಂಘವು ಚುನಾವಣೆಗಿಂತ 181 ದಿನದ ಮುಂಚೆ ಸುಸ್ತಿದಾರರಿಗೆ ಅಂತಿಮ ನೋಟಿಸ್ ನೀಡಿರಬೇಜು. ಆದರೆ ನೀಡಿಲ್ಲ. ಈ ಬಗ್ಗೆ ಬ್ಯಾಂಕಿನಲ್ಲಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಮತದಾರರ ಕರಡು ಪಟ್ಟಿಯನ್ನು ಮುಂಚಿತವಾಗಿ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಮಾಡಿಲ್ಲ. ಆಕ್ಷೇಪಣೆ ಸಲ್ಲಿಸಲು ಯಾವುದೇ ನೋಟಿಸ್ ನೀಡಿಲ್ಲ. ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಕಾಯ್ದೆ ಸಂಖ್ಯೆ 172(ಎ) ಪ್ರಕಾರ ಸಂಘದ ಪ್ರತಿಯೊಂದು ಸದಸ್ಯರು ಸಂಘವು ದೊರಕಿಸಿಕೊಡುವಂತಹ ಕನಿಷ್ಠ ಸೇವೆಯಲ್ಲಿ ಪಿಗ್ಮಿ ಖಾತೆ ಹೊಂದಿದವರಿಗೆ ಮತದಾನದ ಹಕ್ಕನ್ನು ನೀಡಿಲ್ಲ. ಹೀಗೆ ಅನೇಕ ನ್ಯೂನ್ಯತೆಗಳನ್ನು ಇಟ್ಟುಕೊಂಡು ಚುನಾವಣೆ ನಡೆಸಲು ಮುಂದಾಗಿದೆ ಎಂದು ಎಂದರು.
ಸಿಟಿ ಕೊ ಆಪರೇಟಿವ್ ಬ್ಯಾಂಕಿನಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಆಡಳಿತ ಮಂಡಳಿಯೇ ಈ ಅಕ್ರಮಕ್ಕೆ ಕಾರಣ. ಸಹಾಕರ ಸಂಘ ಉಳಿಯಬೇಕು ಎಂದರೆ ಚುನಾವಣೆಯನ್ನು ಮುಂದೂಡಿ ಇರುವ ತಪ್ಪುಗಳನ್ನು ಸರಿಪಡಿಸಿಕೊಂಡು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ದೇವರಾಜು, ದಿನೇಶ್, ಶೇಖರ್, ಮಂಜುನಾಥ್, ಸುಬ್ರಮಣ್ಯ, ಜಗದೀಶ್ ಹಾಜರಿದ್ದರು.