ಚಿತ್ರದುರ್ಗ:ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ತಜ್ಞ ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಗ್ರೂಫ್-ಡಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲಾಸ್ಪತ್ರೆಗೆ ಮಂಜೂರಾದ ಹುದ್ದೆಗಳು ಖಾಲಿ ಇದ್ದಲ್ಲಿ ಹೊರಗುತ್ತಿಗೆ ಆಧಾರದಡಿ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಫಿಜಿಷಿಯನ್, ಹೃದ್ರೋಗ ತಜ್ಞರು, ಅರಿವಳಿಕೆ ತಜ್ಞರು, ನೆಫ್ರೋಲಜಿ, ನ್ಯೂರೋಲಜಿ ಮತ್ತಿತರ ತಜ್ಞ ವೈದ್ಯರ ಕೊರತೆ ಆಗಬಾರದು. ಆಸ್ಪತ್ರೆಯಲ್ಲಿ ಇಂಜಿನಿಯರ್ ಗ್ರೇಡ್ 2 ಹಾಗೂ ಗ್ರೇಡ್ -3 ಹಂತದ 6 ಹುದ್ದೆಗಳು ಖಾಲಿಯಿವೆ. ಹೊರಗುತ್ತಿಗೆ ಅಥವಾ ಪ್ರಭಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲಾಸ್ಪತ್ರೆ ದುರಸ್ತಿ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾಗಿಲ್ಲ. ಆದರೂ ವಾರ್ಡ್ ಚಾವಣಿ ಕುಸಿದು ರೋಗಿಗಳಿಗೆ ತೊಂದರೆ ಆಗುತ್ತಿದೆ. ಕಟ್ಟಡದ ಕ್ಷಮತೆ, ಅಗತ್ಯವಿರುವ ದುರಸ್ತಿ ಕೆಲಸಗಳ ಕುರಿತಂತೆ ಇಂಜಿನಿಯರ್ ವರದಿ ಇಲ್ಲದೇ ಕಾಮಗಾರಿ ನಡೆಸಲಾಗಿದೆಯೇ ಎಂದು ಡಿಎಸ್ ಡಾ.ಎಸ್.ಪಿ.ರವೀಂದ್ರ ಅವರನ್ನು ಪ್ರಶ್ನಿಸಿದರು.
ಜಯದೇವ, ಕಿದ್ವಾಯಿ ಸೇರಿ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಸಿಬ್ಬಂದಿ ಕೊರತೆ ನಡುವೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ನೀಡುತ್ತಿವೆ. ಬೇರೆಡೆಗೆ ಹೊಲಿಸಿದರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ. ಆದರೆ, ಇಲ್ಲಿನ ವೈದ್ಯರಿಗೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಮೇಲಿರುವಷ್ಟು ಕಾಳಜಿ ಜಿಲ್ಲಾಸ್ಪತ್ರೆಯ ಕರ್ತವ್ಯದ ಮೇಲಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿಬ್ಬಂದಿ ಕೊರತೆ ಇದ್ದರೂ ವೈದ್ಯರ ಖಾಸಗಿ ಆಸ್ಪತ್ರೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದರೆ ಹೇಗೆ? ಇದಕ್ಕೆಲ್ಲ ಇಚ್ಚಾಶಕ್ತಿ ಕೊರತೆಯೇ ಕಾರಣ. ಆಡಳಿತಾಧಿಕಾರಿಗಳು, ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಗ್ರೂಫ್ ಡಿ ಸಿಬ್ಬಂದಿ ಮೇಲೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಹಿಡಿತ ಇಲ್ಲವೇ ಎಂದು ಡಿಸಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ವರ್ಷಗಳಲ್ಲಿ ಎಬಿಆರ್‌ಕೆ ಯೋಜನೆಯಡಿ ನೀಡಿದ ಶಸ್ತ್ರಚಿಕಿತ್ಸೆ ಹಾಗೂ ಯೋಜನೆಗೆ ಬಿಡುಗಡೆ ಆದ ಮೊತ್ತದ ವಿವರ ನೀಡುವಂತೆ ಡಿಎಸ್‌ಗೆ ಸೂಚಿಸಿದರು. ವೈದ್ಯರ ಭತ್ಯೆ, ಉಪಕರಣಗಳ ವೆಚ್ಚ, ಡಿಎಸ್ ವಿವೇವಚನಾಧಿಕಾರದ ಖರ್ಚು, ರಾಜ್ಯ ಔಷದೋಗ್ರಾಣದಿಂದ ಸರಬರಾಜಾದ ಔಷಧ ವಿವರ ಹಾಗೂ ಖರೀದಿಸಿದ ಔಷಧಗಳ ವಿವರವನ್ನು ಕಂಪನಿಗಳ ಹೆಸರು ಸಹಿತ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಈ ವರ್ಷ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 2,638 ಹೆರಿಗೆಗಳಾಗಿವೆ. ಇವುಗಳಲ್ಲಿ 1,859 ಸಿಜೇರಿಯನ್‌ಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದ ಡಿಸಿ, ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೆಚ್ಚಾಗುತ್ತಿರುವುದು ಯಾಕೆಂದು ಪ್ರಶ್ನಿಸಿದರು. ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆ ಇತ್ಯಾದಿ ಮಾಹಿತಿಯನ್ನು ಡಿಎಸ್ ಮಾಹಿತಿ ನೀಡಿದರು.
ವಾರಗಟ್ಟಲೆ ಕಾಯುವಂಥ ಪರಿಸ್ಥಿತಿ
ಜಿಲ್ಲಾಸ್ಪತ್ರೆಯಲ್ಲಿ ಮೂಳೆಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ರೋಗಿಗಳು ವಾರಗಟ್ಟಲೇ ಕಾಯುವಂಥ ಪರಿಸ್ಥಿತಿ ಇದೆ ಎಂದು ಸಮಿತಿ ಸದಸ್ಯರು ದೂರಿದರು.
ಜಿಲ್ಲಾಸ್ಪತ್ರೆ ಮುಂದಿರುವ ರಸ್ತೆಯನ್ನು ಹಾಕರ್ ಹಾಗೂ ಪಾರ್ಕಿಂಗ್‌ಗೆ ಮೀಸಲಿರಿಸಿ, ವಾಹನ ಓಡಾಟ ನಿರ್ಬಂದಿಸಲು ನಗರಸಭೆ ತೀರ್ಮಾನಿಸಬೇಕು. ಆಸ್ಪತ್ರೆಯ ಮುಂದಿರುವ ಆಟೋ ನಿಲ್ದಾಣಕ್ಕೂ ಬೇರೆಡೆ ಜಾಗ ಗುರುತಿಸುವಂತೆ ಟಿ. ವೆಂಕಟೇಶ್ ನಗರಸಭೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಆರ್‌ಎಂಒ ಡಾ. ಆನಂದ್ ಪ್ರಕಾಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸಿ.ಒ. ಸುಧಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಶೀತಲ್‌ಪ್ರಶಾಂತ, ಚಿದಾನಂದ ಸ್ವಾಮಿ, ಹಬೀಬುಲ್ಲಾ,ನಾಗರಾಜ ಸಕ್ಕರೆ, ಎಂಆರ್‌ಸಿ ಮೂರ್ತಿ, ರೆಹಮತ್ ಇತರರು ಇದ್ದರು.