ಜಿಲ್ಲೆ

ಸಿಗ್ನಲ್ ಲೈಟ್ ಬೆಳಗುವುದೆಂದು?

ರಾಣೆಬೆನ್ನೂರ: ಹಾವೇರಿ ಜಿಲ್ಲೆಯ ಅತಿದೊಡ್ಡ ತಾಲೂಕು ಕೇಂದ್ರವಾದ ರಾಣೆಬೆನ್ನೂರ ನಗರದಲ್ಲಿ ಸಂಚಾರ ಸೂಚನೆ (ಸಿಗ್ನಲ್ ಲೈಟ್) ದೀಪಗಳು ಬಂದ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ದುರಸ್ತಿಪಡಿಸುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿಲ್ಲ.

ನಗರದಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಿರುವ ಹಲಗೇರಿ ವೃತ್ತ, ಅಂಚೆ ಕಚೇರಿ ವೃತ್ತದಲ್ಲಿಯೇ ಸಿಗ್ನಲ್​ಲೈಟ್​ಗಳು ಕೈಕೊಟ್ಟ ಪರಿಣಾಮ ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವಂತಾಗಿದೆ.

ಇದಲ್ಲದೆ, ನಗರದ ಪಿ.ಬಿ. ರಸ್ತೆ, ರಾಜ್ಯ ಹೆದ್ದಾರಿ, ಮೈಲಾರ, ದೇವರಗುಡ್ಡ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಿವೆ. ಮೆಕ್ಕೆಜೋಳ ಹಾಗೂ ಹತ್ತಿ ವ್ಯಾಪಾರ-ವಹಿವಾಟು ಅಧಿಕವಾಗಿರುವುದರಿಂದ ನಿತ್ಯವೂ ಸಾವಿರಾರು ಲಾರಿ, ಬಸ್, ಗೂಡ್ಸ್ ವಾಹನಗಳು ಬಂದು ಹೋಗುತ್ತವೆ. ಅಲ್ಲದೆ ಬೈಕ್, ಕಾರ್​ಗಳ ಸಂಖ್ಯೆಯೂ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ನಗರದಲ್ಲಿ ನಿತ್ಯವೂ ಹಲಗೇರಿ ವೃತ್ತ, ಅಂಚೆ ಕಚೇರಿ ವೃತ್ತ, ತಹಸೀಲ್ದಾರ್ ಕಚೇರಿ ವೃತ್ತದ ಬಳಿ ಬಹಳಷ್ಟು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ಅಧಿಕವಾಗಿ ಸರ್ಕಾರಿ, ಖಾಸಗಿ ಶಾಲಾ-ಕಾಲೇಜ್​ಗಳಿರುವ ಕಾರಣ ವಿದ್ಯಾರ್ಥಿಗಳ ಓಡಾಟವು ಹೆಚ್ಚಿರುತ್ತದೆ.

ಕೋರ್ಟ್ ವೃತ್ತದಲ್ಲೂ ತೊಂದರೆ: ಸದ್ಯ ನಗರದ ಕೋರ್ಟ್ ವೃತ್ತದಲ್ಲಿ ಸಂಚಾರ ಸೂಚನೆ ದೀಪಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ಬಂದ್ ಆಗುತ್ತಿವೆ. ಹೀಗಾಗಿ, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಸಂಚಾರ ಸೂಚನೆ ದೀಪಗಳು ಕಾರ್ಯನಿರ್ವಹಿಸಿದರೆ, ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ. ಆದ್ದರಿಂದ ಬಂದ್ ಆಗಿರುವ ಸಿಗ್ನಲ್ ದೀಪಗಳನ್ನು ದುರಸ್ತಿ ಪಡಿಸಬೇಕು ಎಂದು ಸಂಚಾರ ಠಾಣೆ ಪೊಲೀಸರಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ನಗರದಲ್ಲಿನ ಸಿಗ್ನಲ್​ಲೈಟ್​ಗಳು ಬಂದ್ ಆಗಿರುವುದರಿಂದ ಸವಾರರು ಮನಬಂದಂತೆ ವಾಹನಗಳನ್ನು ಓಡಿಸುತ್ತಿದ್ದಾರೆ. ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. | ಮಹೇಶ ಎಸ್. ಸ್ಥಳೀಯ ಬೈಕ್ ಸವಾರ ಕೇಬಲ್ ಹಾಗೂ ಯಂತ್ರ ಹಾಳಾದ ಕಾರಣ ಸಿಗ್ನಲ್​ಲೈಟ್​ಗಳು ಬಂದ್ ಆಗಿದೆ. ಅವುಗಳ ದುರಸ್ತಿ ಹಾಗೂ 5 ಕಡೆಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸುವ ಕುರಿತು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದಷ್ಟು ಬೇಗ ಮಾಡಿಸಲಾಗುವುದು. | ಟಿ.ವಿ. ಸುರೇಶ ಡಿವೈಎಸ್ಪಿ ರಾಣೆಬೆನ್ನೂರ