ಕಲಬುರಗಿ: ನಗರದ ಬ್ಲಡ್ ಬ್ಯಾಂಕ್‌ನಲ್ಲಿ ಸಿಗರೇಟ್ ಕದ್ದಿದ್ದಕ್ಕೆ ದಂಡ ಕಟ್ಟಬೇಕು ಎಂದು ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ, ಯುವಕನೋರ್ವನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ನಗರದ ಪ್ರಗತಿ ಕಾಲನಿ ನಿವಾಸಿ ಶಶಿಕಾಂತ ನಾಟಿಕಾರ (೨೫) ಕೊಲೆಯಾದ ಯುವಕ.
ಆರೋಪಿಗಳಾದ ಬ್ಲಡ್ ಬ್ಯಾಂಕ್ ಮಾಲಿಕ ಚಂದ್ರಶೇಖರ ಪಾಟೀಲ್ ಸೋಂತ, ಆದಿತ್ಯ ಶಿವಾಜಿರಾವ, ಓಂಪ್ರಕಾಶ ಘೋರವಾಡಿ, ರಾಹುಲ್ ಪಾಟೀಲ್, ಅಶ್ಪಾಕ್ ಕೂಡಿಕೊಂಡು ಜಾತಿನಿಂದನೆ ಮಾಡಿ, ಕೊಲೆಗೈದಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಆರೋಪಿಗಳಾದ ಆದೇಶ ಅಲಿಯಾಸ ಆದಿತ್ಯ, ಓಂಪ್ರಕಾಶ, ಅಶ್ಪಾಕ್‌ನನ್ನು ಬಂಧಿಸಲಾಗಿದೆ.
ಘಟನೆ ವಿವರ: ಖಾಸಗಿ ಶಾಲೆಯೊಂದರಲ್ಲಿ ವ್ಯಾನ್ ಚಾಲಕನಾಗಿರುವ ಯುವಕ ಶಶಿಕಾಂತ ನಾಟೀಕಾರನು ಗೆಳೆಯ ಆಕಾಶನ ಇರುತ್ತಿದ್ದ ಬಸವೇಶ್ವರ ಆಸ್ಪತ್ರೆ ಎದುರಿನ ಬ್ಲಡ್ ಬ್ಯಾಂಕ್‌ನ ಮೇಲಿನ ಕೋಣೆಯಲ್ಲಿ ಮಲಗಲು ಹೋಗುತ್ತಿದ್ದ. ಡಿ.೧೨ರಂದು ೧.೪೦ ಲಕ್ಷ ರೂ. ಮೌಲ್ಯದ ಸಿಗರೇಟ್ ಪ್ಯಾಕೇಟ್ ಕಳ್ಳತನ ಮಾಡಿದ್ದಾರೆ ಎಂದು ಬ್ಲಡ್ ಬ್ಯಾಂಕ್ ಮಾಲಿಕ ಚಂದ್ರಕಾAತ ಪಾಟೀಲನು ತನ್ನ ಸಹಚರರಿಂದ ಶಶಿಕಾಂತ ಮತ್ತು ಆಕಾಶನಿಗೆ ಚಿತ್ರ ಹಿಂಸೆ ನೀಡಿ, ದಂಡ ಕಟ್ಟಲು ಒತ್ತಾಯಿಸಿದ್ದಾರೆ ಎಂದು ಮೃತನ ತಂದೆ ಮಲ್ಲಿಕಾರ್ಜುನ ದೂರಿನಲ್ಲಿ ತಿಳಿಸಿದ್ದಾರೆ.
ಸಂಜೆ ೫ಕ್ಕೆ ಹೆತ್ತವರನ್ನು ಕರೆ ಮಾಡಿ ಕರೆಸಿದ ಶಶಿಕಾಂತ ನಿತ್ರಾಣನಾಗಿದ್ದ. ಹೆತ್ತವರು ಮನೆಗೆ ಕರೆದುಕೊಂಡು ಹೋಗುವಾಗ ಕುಸಿದು ಬಿದ್ದಿದ್ದಾನೆ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಕ್ಷಿಣ ಎಸಿಪಿ ಜಿ.ಚಂದ್ರಶೇಖರ, ಪಿಐ ಶಿವಾನಂದ ವಾಲಿಕಾರ ಭೇಟಿ ನೀಡಿ, ಪರಿಶೀಲಿಸಿದ್ದಾರೆ.