ಜಿಲ್ಲೆ

ಸಿಐಡಿಯಿಂದ ದಾಖಲೆ ಪರಿಶೀಲನೆ

ಗುತ್ತಲ: ಸ್ಥಳೀಯ ಪ.ಪಂ.ನಲ್ಲಿ 2.97 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಸಿಐಡಿ ವಿಭಾಗದ ವೃತ್ತ ನಿರೀಕ್ಷಕ ಸಿದ್ದೇಗೌಡ ಎಚ್.ಎಂ. ನೇತೃತ್ವದ ತಂಡ ಶನಿವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ದಾಖಲೆ ಪರೀಶಿಲನೆ ಕೈಗೊಂಡಿತು.

ಪ.ಪಂ.ನ ಸನ್ 2015-16ರಿಂದ 2018ರವರೆಗೆ 14ನೇ ಹಣಕಾಸು, ಎಸ್​ಎಫ್​ಸಿ (ರಾಜ್ಯ ಹಣಕಾಸು), ಕುಡಿಯುವ ನೀರಿನ ಸುಮಾರು 2.97 ಕೋಟಿ ರೂ.ಗಳ ಅನುದಾನವನ್ನು ಹಿಂದಿನ ಮುಖ್ಯಾಧಿಕಾರಿ ಡಿ.ಎನ್. ಧರಣೇಂದ್ರಕುಮಾರ ಹಾಗೂ ದ್ವಿತೀಯ ದರ್ಜೆ ಸಹಾಯಕ ಜಿ.ಟಿ. ಪೂಜಾರ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ಇತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಆಗಮಿಸಿದ ಸಿಐಡಿ ತಂಡ, ಬೆಳಗ್ಗೆಯಿಂದ ಹಿಂದಿನ ಮುಖ್ಯಾಧಿಕಾರಿ ಎಂ.ಕೆ. ಮುಗಳಿ ಹಾಗೂ ಹಾಲಿ ಮುಖ್ಯಾಧಿಕಾರಿ ಏಸು ಬೆಂಗಳೂರ ಅವರಿಂದ ದಾಖಲೆ ಪಡೆದುಕೊಂಡು ಸಿಐಡಿ ವೃತ್ತ ನಿರೀಕ್ಷಕ ಸಿದ್ದೇಗೌಡ ನೇತೃತ್ವದ ತಂಡದ ಸಿಬ್ಬಂದಿ ಲಕ್ಷಣ, ಗಿರೀಶ, ರವಿ ಹಾಗೂ ಲೆಕ್ಕಪರಿಶೋಧಕರು ತಡರಾತ್ರಿಯವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು.

ಆರೋಪ ಎದರಿಸುತ್ತಿರುವ ಧರಣೇಂದ್ರಕುಮಾರ ಪ್ರಸ್ತುತ ಮಲೇಬೆನ್ನೂರ ಪ.ಪಂ.ಗೆ ಮುಖ್ಯಾಧಿಕಾರಿಯಾಗಿದ್ದು, ಹಣ ದುರ್ಬಳಕೆ ಸಂಬಂಧ 2018ರಲ್ಲಿ ಪ್ರಕರಣ ದಾಖಲು ಆಗಿದೆ.

ನಗರಸಭೆ, ಪುರಸಭೆ ಹಾಗೂ ಪ.ಪಂ.ನಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಹೆಸರಿನಲ್ಲಿ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕಳೆದ ಜನವರಿಯಲ್ಲಿ ಹಾವೇರಿಯ ಜಿ.ಪಂ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ತನಿಖೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ದೂರಿನಲ್ಲಿ ಆರೋಪಿಸಲಾಗಿರುವ ದಾಖಲೆ ಪರೀಶಿಲನೆ ಕೈಗೊಂಡು ವರದಿ ಸಲ್ಲಿಸುತ್ತೇವೆ. ಈಗಲೇ ಏನನ್ನ ಹೇಳಲಾಗದು. | ಸಿದ್ದೇಗೌಡ ಎಚ್.ಎಂ ಸಿಐಡಿ ವಿಭಾಗದ ವೃತ್ತ ನಿರೀಕ್ಷಕ, ದಾವಣಗೆರೆ
ಹಗರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆದಷ್ಟು ಬೇಗ ತಪ್ಪಿಸ್ಥರನ್ನು ಶಿಕ್ಷಿಸಬೇಕು. ದುರ್ಬಳಕೆಯಾದ ಹಣ ವಸೂಲಿ ಮಾಡಿ ಗುತ್ತಲ ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸಬೇಕು. ಧರಣೇಂದ್ರಕುಮಾರ ಅಧಿಕಾರ ನಡೆಸಿದ ಎಲ್ಲೆಡೆಯೂ ಅನುದಾನ ದುರ್ಬಳಕೆ ಮಾಡಿದ್ದಾರೆ. | ನಾಗರಾಜ ಎರಿಮನಿ ಪಟ್ಟಣ ಪಂಚಾಯಿತಿ ಸದಸ್ಯ