ಜಿಲ್ಲೆ

ಸಿಐಡಿ ತನಿಖೆಗೆ ನಿರ್ಧಾರ

ಮಂಡ್ಯ: ರಾಜ್ಯದಲ್ಲಿ ಕಳಪೆ ಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ತಾಲೂಕಿನ ವಿ.ಸಿ. ಫಾರ್ಮ್‌ನ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿ ನಿಲಯಗಳ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಳಪೆ ರಸಗೊಬ್ಬರ ಮಾರಾಟ ಪ್ರಕರಣವನ್ನು ರಾಜ್ಯದ ಮಂಡ್ಯ, ಮೈಸೂರು, ಗದಗ, ಚಿತ್ರದುರ್ಗದಲ್ಲಿ ಕೃಷಿ ಜಾಗೃತ ದಳದ ಅಧಿಕಾರಿಗಳು ಪತ್ತೆ ಮಾಡಿರುವುದರಿಂದ ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಚಿವನಾದ ಮೇಲೆ ಕಳಪೆ ಗೊಬ್ಬರ, ಬೀಜಗಳನ್ನು ಸೀಜ್ ಮಾಡಿ 354 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲು ಮಾಡಲಾಗಿದೆ. 248 ಲೈಸೆನ್ಸ್‌ಗಳನ್ನು ಅಮಾನತು ಮಾಡಲಾಗಿದೆ. 35 ಪರವಾನಗಿಯನ್ನು ರದ್ದು ಮಾಡಲಾಗಿದೆ. 34 ಪ್ರಕರಣಗಳಲ್ಲಿ ನ್ಯಾಯಾಲಯ 15.20 ಲಕ್ಷ ರೂ. ದಂಡ ವಿಧಿಸಿದೆ ಎಂದರು.

ರೈತರ ಮಕ್ಕಳಿಗಳಿಗೆ ಸೀಮಿತವಾಗಿದ್ದ ವಿದ್ಯಾರ್ಥಿ ವೇತನವನ್ನು ರೈತ ಕಾರ್ಮಿಕರ ಮಕ್ಕಳಿಗೂ ವಿಸ್ತಾರಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ 67 ರೈತ ಉದ್ದಿಮೆದಾರರಿಗೆ 19.14 ಕೋಟಿ ರೂ. ಸಬ್ಸಿಡಿ ಕೊಟ್ಟಿದ್ದೇವೆ. 55,571 ರೈತರಿಗೆ ಬೆಳೆ ವಿಮೆ ಕೊಟ್ಟಿದ್ದೇವೆ. ರೈತರ ಪರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ರೈತರಿಗೆ ವಿವಿಧ ವಿಭಾಗಗಳಲ್ಲಿ ಸಬ್ಸಿಡಿಯನ್ನು ನೀಡುತ್ತಿದ್ದೇವೆ ಎಂದರು.

ರೈತರು ಸಶಕ್ತರಾಗಬೇಕು. ರೈತ ಈ ದೇಶದ ಅನ್ನದಾತ ಎಂಬ ನಿಟ್ಟಿನಲ್ಲಿ ಅನುದಾನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಯೋಜನೆಗಳನ್ನು ಘೋಷಣೆ ಮಾಡಿ ನೆರವಾಗುತ್ತಿದೆ. ರೈತರಿಗೆ ಅನುಕೂಲವಾಗುವ ರೀತಿ ಕೃಷಿ ಯಂತ್ರಧಾರೆಗಳ ಯೋಜನೆಗೆ ಬದಲಾವಣೆ ತರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ಬೆಳೆಗಳಿಗೆ ಹಾನಿಯುಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಪರಿಹಾರದ ಮಾಹಿತಿ ಕೊಡುತ್ತಿದ್ದಂತೆ ಅವರಿಗೆ ಹಣ ಬಿಡುಗಡೆ ಆಗಲಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ಒಂದು ಹೆಕ್ಟೇರ್‌ಗೆ ನಿಗದಿಯಾಗಿದ್ದ 6,800 ರೂ. ಪರಿಹಾರವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ 13,600 ರೂ.ಗೆ ಏರಿಸಲಾಗಿದೆ. ನೀರಾವರಿಗೆ 25,000 ರೂ.ಗೆ, ತೋಟಗಾರಿಕೆ ಬೆಳೆಗೆ 28,000 ರೂ. ಹೆಚ್ಚಿಸಿ ಪರಿಹಾರ ನೀಡಲು ಚರ್ಚೆ ಮಾಡಲಾಗುತ್ತಿದೆ. ಪರಿಹಾರಕ್ಕೆ ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ವಿವರಿಸಿದರು.

ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಣವಂತರು ಹವ್ಯಾಸಕ್ಕಾಗಿ ಕೃಷಿ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ. ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದೆ. ರೈತರಿಗೆ ಸಹಕರಿಸುವಂತೆ ಹೆಚ್ಚು ಯೋಜನೆಗಳು ರೂಪುಗೊಳ್ಳಬೇಕು. ಕೃಷಿ ಲಾಭದಾಯಕವಾಗಿ ಮಾರ್ಪಡಾಗಬೇಕು. ಆಗ ಮಾತ್ರ ಹೆಚ್ಚಿನ ಜನರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಮೈಶುಗರ್ ಕಾರ್ಖಾನೆ ಹಾಗೂ ವಿ.ಸಿ. ಫಾರ್ಮ್ ಅಭಿವೃದ್ಧಿ ಮಂಡ್ಯ ಜಿಲ್ಲೆಯ ರೈತರಿಗೆ ಬೇಕಿರುವ ಎರಡು ಮುಖ್ಯ ಅಂಶಗಳು. ವಿ.ಸಿ. ಫಾರ್ಮ್‌ನಲ್ಲಿ ಹೆಚ್ಚು ಸಂಶೋಧನೆಗಳು ರೈತರಿಗೆ ಪೂರಕವಾಗಿ ನಡೆಯಬೇಕು ಎಂದರು.

ಪಿಎಸ್‌ಐ ನೇಮಕ ಹಗರಣದಲ್ಲಿ ಯಾವುದೇ ಪಕ್ಷದ ಶಾಸಕರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಕ್ರಮ ಜರುಗಿಸಲು ಸೂಚನೆ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ನನಗೂ ಈ ಹಗರಣ ಅಚ್ಚರಿ ಮೂಡಿಸಿದೆ. 81ನೇ ಇಸವಿಗೂ ಮುನ್ನ ಇನ್‌ಫ್ಲೂಯೆನ್ಸ್ ನಡೆಯುತ್ತಿತ್ತು. ನಮಗೆ 79ರಲ್ಲಿ ಪಿಎಸ್‌ಐ ಆಗಿ ನೇಮಕವಾಯಿತು. 1981ರ ನಂತರ ಸಂಪೂರ್ಣ ಮೆರಿಟ್ ಮೇಲೆ ಕೆಲಸ ಆಗುತ್ತಿತ್ತು. ನನ್ನ ಹತ್ತಿರವೂ ಅಭ್ಯರ್ಥಿಗಳು ಬರುತ್ತಾರೆ. ಶ್ರಮಪಟ್ಟು ಮಾಡಿ ಎಂದು ನಾನು ನೇರವಾಗಿಯೇ ಹೇಳಿ ಕಳುಹಿಸುತ್ತೇನೆ. ಈ ರೀತಿ ನಡೆಯುತ್ತಿರುವುದು ಬಯಲಿಗೆ ಬಂದ ಮೇಲೆಯೇ ಗೊತ್ತಾದದ್ದು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆಯೂ ನಡೆದಿದೆ. ಆದರೆ ಅವರು ಬಯಲು ಮಾಡುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಈ ಹಗರಣ ಬಯಲು ಮಾಡಿದ್ದೇವೆ. ಎಡಿಜಿಪಿ ಮೇಲೂ ಕೇಸ್ ಆಗಿದೆ. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆ ಎಲ್ಲಿ ತಲುಪುತ್ತೋ ಗೊತ್ತಿಲ್ಲ. ಹಿಂದೆ ಆಗಿರುವುದನ್ನೂ ತನಿಖೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರಪ್ರಸಾದ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎ. ಪ್ರಕಾಶ್, ಡಾ. ಡಿ. ರಘುಪತಿ ಇತರರಿದ್ದರು.