ಎಚ್.ಡಿ.ಕೋಟೆ: ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಮಿಕ, ರೈತ ವಿರೋಧಿ ಕಾನೂನುಗಳ ರದ್ದತಿಗಾಗಿ ಹಾಗೂ ದುಡಿಯುವ ಜನರ ಹಕ್ಕುಗಳ ಉಳಿವಿಗೆ ಆಗ್ರಹಿಸಿ ಸಿಐಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಪ್ರಾಂತ ರೈತ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 8 ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ನಂತರ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿ ಇರುವ ಅಂಚೆ ಕಚೇರಿ ಹಾಗೂ ದೂರವಾಣಿ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಟೀಂ ನೌಕರರಿಗೂ ರಾಷ್ಟ್ರವ್ಯಾಪಿ 26 ಸಾವಿರ ಹಾಗೂ ರಾಜ್ಯವ್ಯಾಪಿ 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸಿಪಿಎಂ ಶಿವಣ್ಣ, ಗುತ್ತಿಗೆ, ಹೊರ ಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ, ಅಪ್ರೆಂಟಿಸ್, ಟ್ರೈನಿ, ನ್ಯಾಪ್ಸ್ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಗಿಗ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್, ಮೆಕಾನಿಕ್, ಬೀಡಿ-ಅಗರಬತ್ತಿ, ಹೆಂಚು ಕಾರ್ಮಿಕರು, ಮೀನುಗಾರರು ಇನ್ನಿತರ ಎಲ್ಲ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಮಾಸಿಕ 9 ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಸರ್ಕಾರಕ್ಕೆ ಒತ್ತಾಯಿಸಿದರು.
ನಂತರ ತಾಲೂಕು ಪಂಚಾಯತಿ ಇಒ ಧರಣೀಶ್ ಅವರಿಗೆ ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪೆನ್ನನ್ ಸ್ಕೀಂ ಮರು ಸ್ಥಾಪಿಸಬೇಕು, ಇಎಸ್‌ಐ, ಪಿ.ಎಫ್, ಬೋನಸ್ ಪಾವತಿಗಿರುವ ಎಲ್ಲ ವೇತನ ಮಿತಿಯನ್ನು ತೆಗೆಯಬೇಕು. ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು, ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ಕಾರ್ಮಿಕ ಸಂಘಗಳ ಕಡ್ಡಾಯ ನೋಂದಣಿ ಹಾಗೂ ಮಾನ್ಯತೆ ನೀಡಬೇಕು.
ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಆಹಾರ, ಔಷಧಗಳು, ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು. ಪೆಟ್ರೋಲ್, ಡೀಸೆಲ್, ಉಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂಬ ಇಪ್ಪತೊಂದು ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಂಗಳಮ್ಮ, ಲೀಲಾವತಿ, ಶಾಂತ, ಲತಾ, ದೇವರಾಜಮ್ಮ, ಮುದ್ದಮ್ಮ, ಶಾಂತಕುಮಾರಿ, ನಾಗಮ್ಮ, ಸವಿತಾ, ಚಿನ್ನಮ್ಮ, ನೀಲಮ್ಮ, ಸುಧಾ, ಸಬ್ರಿನ್ ತಾಜ್, ಯಶೋಧ, ಭಾರತಿ, ಗೌರಮ್ಮ, ಪುಷ್ಪಮ್ಮ, ಮಲ್ಲಿಗಮ್ಮ, ಕವಿತಾ, ಸುಮಾ, ಪ್ರಭಾವತಿ, ಶಿವಕುಮಾರಿ, ಜ್ಯೋತಿ, ರೂಪ, ಫಾರೂಕ್, ನೀಲಮ್ಮ, ಕರಿಗೌಡ, ಸಿದ್ದನಾಯ್ಕ ಇದ್ದರು.