ಜಿಲ್ಲೆ

ಸಿಐಟಿ ಕಾಲೇಜಿನಲ್ಲಿ ಶೌರ್ಯ ದಿವಸ ಆಚರಣೆ

ಗೋಣಿಕೊಪ್ಪಲು: ಪೊನ್ನಂಪೇಟೆ ಸಿಐಟಿ ಕಾಲೇಜಿನ ಎಐಎಂಎಲ್ ವಿಭಾಗದ ಅವಿನ್ಯಂ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪರಮವೀರ ಚಕ್ರ ಪುರಸ್ಕೃತ ದಿ.ಕ್ಯಾಪ್ಟನ್ ವಿಕ್ರಮ್ ಭಾತ್ರಾ ಅವರ ಹುಟ್ಟುಹಬ್ಬದ ಅಂಗವಾಗಿ ಶೌರ್ಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್‌ಸಿಂಗ್ ಅವರು ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಕ್ಷಣಾ ವಲಯದಲ್ಲಿ ತಂತ್ರಜ್ಞಾನ ವಹಿಸುತ್ತಿರುವ ಪಾತ್ರ, ಶಿಸ್ತು ಮತ್ತು ನಾಯಕತ್ವದ ಅಗತ್ಯತೆ ಬಗ್ಗೆ ವಿವರಿಸಿದರು. ಅಲ್ಲದೆ ಇಂಜಿನಿಯರಿಂಗ್ ಬಳಿಕ ಸೇನೆ ಸೇರುವ ಅವಕಾಶಗಳು ಹಾಗೂ ಸೇನೆ ಸೇರುವುದರಿಂದ ದೊರೆಯುವ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಭಾರ ಪ್ರಾಂಶುಪಾಲ ಪ್ರೊ.ಎ.ಜಿ.ತಿಮ್ಮಯ್ಯ(ಮೆಕ್ಯಾನಿಕಲ್ ವಿಭಾಗ) ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ವಿದ್ಯಾರ್ಥಿಗಳು ಸೇನೆಗೆ ಸೇರುವುದರ ಮೂಲಕ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ರಕ್ಷಣಾ ವಲಯದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.

ವಿವಿಧ ವಿಭಾಗಗಳ ಮುಖ್ಯಸ್ಥರು, ಎಐಎಂಎಲ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಬಿ.ರಾಮಕೃಷ್ಣ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿಗಳಿಂದ ನಡೆದ ದೇಶಭಕ್ತಿ ಗೀತೆ ಹಾಗೂ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.