ಜಿಲ್ಲೆ

ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ

ಪಾಂಡವಪುರ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರಿ ಶಾಲೆಗಳು ಮಹತ್ತರ ಕೊಡುಗೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಸರಿಸಮಾನವಾಗಿ ಬೆಳೆಸುವ ಅಗತ್ಯವಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬೇವುಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 22.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಅಗತ್ಯವಾಗಿರುವ ಮೂಲಸೌಲಭ್ಯಗಳನ್ನು ಒದಗಿಸಿದರೆ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಶಿಕ್ಷಣದಲ್ಲಿ ಸಾಧನೆ ಮಾಡುವ ಕೌಶಲ ವೃದ್ಧಿಸಿಕೊಳ್ಳುತ್ತಾರೆ. ಅದಕ್ಕಾಗಿ ಸರ್ಕಾರ ಉನ್ನತ ಮಟ್ಟದ ಸೌಕರ್ಯಗಳನ್ನು ಒದಗಿಸಬೇಕು. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಹೋಬಳಿಗೆ ಒಂದರಂತೆ ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಸತಿನಿಲಯಗಳ ವಿದ್ಯಾರ್ಥಿಗಳ ಕಲಿಕೆಗೆ ಸುಸಜ್ಜಿತವಾದ ಕಟ್ಟಡ, ಆಟದ ಮೈದಾನ, ನುರಿತ ಶಿಕ್ಷಕರು ಓದಿಗೆ ಅನುಕೂಲವಿರುವ ವಾತಾವರಣ ಸೃಷ್ಟಿಸಿಕೊಟ್ಟರೆ ಮಕ್ಕಳು ಓದಿನ ಬಗ್ಗೆ ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ದುದ್ದ ಹೋಬಳಿಯ ಬೇವುಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕನಹಳ್ಳಿ ಗ್ರಾಮದಲ್ಲಿ ಅತ್ಯುತ್ತಮ ವ್ಯವಸ್ಥೆಗಳೊಂದಿಗೆ 22.50 ಕೋಟಿ ರೂ.ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನಾವು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಿದರೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸುತ್ತಾರೆ. ಉತ್ತಮ ಶಿಕ್ಷಣ ಸಿಕ್ಕರೆ ಒಳ್ಳೆಯ ಉದ್ಯೋಗ ದೊರೆಯುತ್ತದೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.

ಕಾಮಗಾರಿ ಗುತ್ತಿಗೆ ಪಡೆದವರು ಒಂದು ವರ್ಷದ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ವಸತಿ ಶಾಲೆ ಮಕ್ಕಳ ಓದಿಗೆ ಲಭ್ಯವಾಗಬೇಕು. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಕಾಂಗ್ರೆಸ್ ಮುಖಂಡ ರವಿಭೋಜೇಗೌಡ, ಗ್ರಾಪಂ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷ ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ಮುಖಂಡರಾದ ದರ್ಶನ್, ಹರ್ಷ, ದಕ್ಷಿಣ ಮೂರ್ತಿ, ಶಿವಕುಮಾರಸ್ವಾಮಿ, ಬೀರಪ್ಪ, ವಿನಯ್ ಇತರರು ಇದ್ದರು.