ಹುಬ್ಬಳ್ಳಿ: ಸಿಎಎ ಬೆಂಬಲಿಸಿ ಪ್ರಗತಿಪರ ದಲಿತ ಒಕ್ಕೂಟಗಳ ಮಹಾಸಭಾ ಹಾಗೂ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸಮಾವೇಶಗೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಇಡೀ ಭಾರತಕ್ಕೆ ಒಳಿತಾಗಲಿದೆ ಎಂಬ ಸಂದೇಶವನ್ನು ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ರವಾನಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ತಹಸೀಲ್ದಾರ್ ಕಚೇರಿವರೆಗೆ ಬೃಹತ್ ರ‍್ಯಾಲಿ ನಡೆಸಿದರು. ರ‍್ಯಾಲಿ ಉದ್ದಕ್ಕೂ ಸಿಎಎಯಿಂದ ಆಗುವ ಲಾಭ ಹಾಗೂ ಯಾರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಕಾರ್ಯಕರ್ತರು ಮನದಟ್ಟು ಮಾಡಿಕೊಟ್ಟರು.
ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಿಎಎಯಿಂದ ದೇಶದ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ. ಪೌರತ್ವ ತಿದ್ದುಪಡಿ ದಲಿತ ವಿರೋಧಿಯಲ್ಲ ಎಂದು ದಲಿತ ಒಕ್ಕೂಟವೇ ಒಪ್ಪಿಕೊಂಡು ಅಭಿನಂದನೆ ಸಲ್ಲಿಸಿದೆ. ಪಾಕಿಸ್ತಾನದಲ್ಲಿ ಹಿಂದು ಹಾಗೂ ದಲಿತರನ್ನು ಶೋಷಿಸಲಾಗುತ್ತದೆ. ಕಾಂಗ್ರೆಸ್ನವರು ದಲಿತರ ಹೆಸರಲ್ಲಿ ಕಪಟ ನಾಟಕ ಮಾಡುತ್ತಿದ್ದಾರೆ. ಸಿಎಎ, ಎನ್ಪಿಆರ್ ಪ್ರಾರಂಭಿಸಿದ್ದು ಕಾಂಗ್ರೆಸ್. ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂಬ ಭರವಸೆ ನೀಡುತ್ತೇನೆ. ಕಾಂಗ್ರೆಸ್ನವರ ಮಾತು ನಂಬಬೇಡಿ. ಶೋಷಿತರು, ದಲಿತರಿಗೆ ನ್ಯಾಯ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಿಶ್ವಾಸ ಮೂಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಸಿಎಎಯಿಂದ ಅಲ್ಪಸಂಖ್ಯಾತರು ಭಯ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ನವರು ಅಪ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ದೇಶದ ಸುಭದ್ರತೆಗೆ ಕಾಯ್ದೆ ಅತ್ಯಗತ್ಯ ಎಂದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ದಲಿತ ಮುಖಂಡರಾದ ಚಂದ್ರಶೇಖರ ಗೋಕಾಕ, ಲಕ್ಷ್ಮಣ ಬಿಳಗಿ, ಮಹೇಂದ್ರ ಕೌತಾಳ, ರಂಗನಾಯಕ ತಪೇಲಾ, ಅರುಣ ಹುದ್ಲಿ, ರಾಕೇಶ ದೊಡ್ಡಮನಿ, ಸುಭಾಷ್ ಅಂಕಲಕೋಟಿ, ಹನುಮಂತಪ್ಪ ದೊಡ್ಡಮನಿ, ಪರಶುರಾಮ ಪೂಜಾರ, ಶಶಿಕಾಂತ ಬಿಜವಾಡ, ಅನೂಪ ಬಿಜವಾಡ, ಬಸವರಾಜ ಅಮ್ಮಿನಭಾವಿ, ಮಂಜುನಾಥ ಬಿಜವಾಡ, ಬಸು ಜಾಧವ, ನಾಗರಾಜ ಟಗರಗುಂಟಿ, ಅಣ್ಣಪ್ಪ ಬಾಗಲಕೋಟಿ, ಅಣ್ಣಪ್ಪ ಗೋಕಾಕ್, ರೇಣುಕಪ್ಪ ಕೇಲೂರ, ಮಂಜುನಾಥ ಸಣ್ಣಕ್ಕಿ, ಗುರುನಾಥ ರೋಣ ಇತರರು ಇದ್ದರು.
ಕಾಂಗ್ರೆಸ್ಗೆ ದೇಶದೆಲ್ಲೆಡೆ ದೆಹಲಿ ಗತಿ: ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ ನಿಜ. ಆದರೆ, ಕಾಂಗ್ರೆಸ್ ಪಕ್ಷವನ್ನು ಜನ ದೆಹಲಿಯಿಂದಲೇ ವಾಷ್ಔಟ್ ಮಾಡಿದ್ದಾರೆ. ದೇಶದಿಂದ ಕೂಡ ಕಾಂಗ್ರೆಸ್ ವಾಷ್ಔಟ್ ಆಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಭವಿಷ್ಯ ನುಡಿದರು. ಗುರುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದೆಲ್ಲೆಡೆ ಶೇ. 50ಕ್ಕಿಂತಲೂ ಹೆಚ್ಚು ಬೆಂಬಲ ಬಿಜೆಪಿಗೆ ಲಭಿಸಿದೆ. ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆದ್ದಿದೆ. ಸಿಎಎ ಮತ್ತು ಕಾಶ್ಮೀರಕ್ಕೂ ದೆಹಲಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಸ್ಥಳೀಯವಾಗಿ ಅನೇಕ ಸಮಸ್ಯೆಗಳಿರುತ್ತವೆ. ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಶರಣಾಗಿದೆ ಎಂದರು. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕೆಲ ಕಾನೂನು ತೊಡಕುಗಳಿವೆ. ಅವುಗಳನ್ನು ಮೊದಲು ಬಗೆಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದರು. ಸಚಿವ ಆರ್. ಅಶೋಕ ಅವರ ಮಗನ ಕಾರು ಅಪಘಾತದ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ದೆಹಲಿಯಿಂದ ಈಗ ಬಂದಿದ್ದೇನೆ. ಅಪಘಾತದ ಬಗ್ಗೆಯಾಗಲಿ ಅಥವಾ ಇತರ ಬೆಳವಣಿಗೆ ಕುರಿತು ನನಗೆ ಮಾಹಿತಿಯಿಲ್ಲ ಎಂದರು.