ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್ಆರ್ಸಿ) ಶ್ರೀರಾಮ ಸೇನೆಯ ಬೆಂಬಲವಿದೆ. ದೇಶದ ಸುರಕ್ಷತೆ ದೃಷ್ಟಿಯಿಂದ ಇದು ಅತ್ಯಗತ್ಯ. ಇದರಿಂದ ಭಾರತದ ಮುಸ್ಲಿಂ ಸಮಾಜದವರಿಗೆ ಯಾವುದೇ ತೊಂದರೆಯಾಗದಿದ್ದರೂ ಕಾಂಗ್ರೆಸ್, ಎಡಪಕ್ಷಗಳು ಗೊಂದಲ ಸೃಷ್ಟಿಸಿ ನಿರ್ಲಜ್ಜ ರಾಜಕಾರಣ ಮಾಡುತ್ತಿವೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಕಾಯ್ದೆ ಹೆಸರಲ್ಲಿ ಭಾರತೀಯ ಮುಸ್ಲಿಮರಿಗೆ ತಪ್ಪು ಮಾಹಿತಿ ನೀಡಿ ಪ್ರಚೋದನೆ ನೀಡುತ್ತಿದ್ದಾರೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶದ ತೊಂದರೆಗೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಮಹಾತ್ಮ ಗಾಂಧಿ, ಜವಾಹರಲಾಲ ನೆಹರು ಕೂಡ ಬಯಸಿದ್ದರು. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಇಬ್ಭಾಗವಾದಾಗ ಇಂದಿರಾ ಗಾಂಧಿಯವರು ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ ಸೌಕರ್ಯ ಕಲ್ಪಿಸಿದ್ದರು ಎಂದರು.
ಕಾಯ್ದೆ ಜಾರಿ ಬೆಂಬಲಿಸಿ ಶ್ರೀರಾಮ ಸೇನೆಯಿಂದ ರಾಜ್ಯದ 100 ಕಡೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ನಾಡಿನ ಪ್ರಮುಖ ಮಠಾಧೀಶರು, ಬುದ್ಧಿಜೀವಿಗಳು, ಸೆಲೆಬ್ರಿಟಿಗಳು, ಚಿತ್ರನಟರು ಸೇರಿ 100 ಪ್ರಮುಖರ ಸಹಿಗಳನ್ನು ಸಂಗ್ರಹಿಸಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಕೇಂದ್ರ ಗೃಹಸಚಿವ ಅಮಿತ ಷಾಗೆ ಸಲ್ಲಿಸಲಾಗುವುದು ಎಂದರು. ದೆಹಲಿ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಎನ್ಯುು ಕಮುನಿಸ್ಟರ ಅಡ್ಡೆಯಾಗಿದೆ. ಶೈಕ್ಷಣಿಕ ಸಂಸ್ಥೆಯೊಂದು ರಾಜಕೀಯ ಹಿತಾಸಕ್ತಿಗಳಿಗೆ ಪೂರಕ ಚಟುವಟಿಕೆಗಳ ತಾಣವಾಗಿರುವುದು ದುರದೃಷ್ಟಕರ. ಹಿರಿಯ ಮುಖಂಡ ಸುಬ್ರಮಣಿಯನ್ಸ್ವಾಮಿ ಅಭಿಪ್ರಾಯದಂತೆ 2 ವರ್ಷಗಳ ಮಟ್ಟಿಗೆ ಜೆಎನ್ಯುು ಮುಚ್ಚುವುದು ಒಳ್ಳೆಯದು. ಅಂದಾಗ ರಾಜಕೀಯದಿಂದ ಕಲುಷಿತವಾಗಿರುವುದು ಸ್ವಚ್ಛವಾಗಲಿದೆ. ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಜಿಲ್ಲಾ ಪ್ರಮುಖ ಮಂಜುನಾಥ ಕಾಟಕರ, ಇತರರಿದ್ದರು.