ಚಾಮರಾಜನಗರ: ಒಳಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಖಮಂತ್ರಿ ಸಿದ್ದರಾಮಯ್ಯ ದಲಿತ ಸಮುದಾಯಗಳಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡ ಅರಕಲವಾಡಿ ನಾಗೇಂದ್ರ ಆರೋಪಿಸಿದರು.
ಸಾಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರಗಳಿಗೆ ಅವಕಾಶವನ್ನು ನೀಡಿದೆ. ಸುಪ್ರೀಂ ಕೋರ್ಟ್ ತೀರ್ು ಬಂದು ಎರಡು ತಿಂಗಳು ಕಳೆದಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ವಿಚಾರದಲ್ಲಿ ಸ್ಪಋಶ್ಯ ಜಾತಿಗಳನ್ನು ಓಲೈಕೆ ಮಾಡುತ್ತಿದ್ದು, ಹೊಲೆಯ ಮತ್ತು ಮಾದಿಗ ಸಮುದಾಯಗಳನ್ನು ಇಬ್ಭಾಗಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುತಂತ್ರಗಳನ್ನು ದಲಿತ ಸಮುದಾಯ ಅರಿತುಕೊಳ್ಳಬೇಕಿದೆ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಈಗಾಗಲೇ ಸುಪ್ರೀಂ ಕೋಟ್ ತೀರ್ಪನ್ನು ಮುಖ್ಯಮಂತ್ರಿ ಸ್ವಾಗತಿಸಿದ್ದಾರೆ. ದಲಿತ ಮುಖಂಡರಿಗೆ ಒಳಮೀಸಲಾತಿ ಜಾರಿಗೆ ಬದ್ಧ ಎಂದು ಭರವಸೆ ನೀಡುತ್ತಿದ್ದಾರೆ. ಆದರೇ ಸಚಿವ ಸಂಪುಟ ಸಭೆಯನ್ನು ಮುಂದೂಡುವ ಮೂಲಕ ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ. ಅ.28 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಬೇಕು. ಇಲ್ಲವಾದರೇ ಒಳಮೀಸಲಾತಿ ಪರವಾಗಿ ಇರುವ ದಲಿತ ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್ ಒಳಮೀಸಲಾತಿ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಉಪಚುನಾವಣೆಗಳು ೋಷಣೆಯಾಗಿರುವ ಹಿನ್ನೆಲೆಯಲ್ಲಿ ಒಳಮೀಸಲಾತಿ ಸಂಬಂಧ ಗೊಂದಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿರುವಷ್ಟು ದತ್ತಾಂಶ ಯಾವ ರಾಜ್ಯದಲ್ಲೂ ಇಲ್ಲ. ಅದಾಗ್ಯೂ ಸಿಎಂ ಸಿದ್ದರಾಮಯ್ಯ ದತ್ತಾಂಶ ಕೊರತೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವಕೀಲ ಬೂದಿತಿಟ್ಟು ರಾಜೇಂದ್ರ, ಎಚ್.ಮೂರ್ತಿ, ಬೆಳ್ಳಿಯಪ್ಪ, ಮುರುಗೇಶ್, ಚೆನ್ನಬಸವ, ಶಿವಣ್ಣ ಹಾಜರಿದ್ದರು.