ಬಾಗಲಕೋಟೆ: ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ವೇದಿಕೆಗೆ ತೆರಳುವ ಮುನ್ನ ಗದ್ದನಕೇರಿ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹ್ವಾಲ ಸ್ವೀಕರಿಸಿ ಸ್ಪಂದಿಸದೇ ಹೋದರೇ ಸಿಎಂ ಭಾಗವಹಿಸುವ ಕಾರ್ಯಕ್ರಮಕ್ಕೆ ತೆರಳಿ ಘೇರಾವ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ನ.೧೭ ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಕಬ್ಬು ಬೆಳಗಾರರು ಸೂಕ್ತ ಬೆಲೆ ಸಿಗದೇ ಸಂಕಷ್ಟದಲ್ಲಿದ್ದು, ಕಳೆದ ೧೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವರೆಗೂ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸಿಲ್ಲ. ಇದೀಗ ಸಿಎಂ ಆಗಮಿಸುತ್ತಿರುವ ಕಾರಣ ಅವರೇ ಕಾರ್ಖಾನೆಗಳಿಗೆ ಸೂಚನೆ ಕೊಟ್ಟು ಪ್ರಸಕ್ತ ಹಂಗಾಮಿಗೆ ಪ್ರತಿಟನ್ ಕಬ್ಬಿಗೆ ೩೫೦೦ ರೂ. ಮೊದಲ ಕಂತಿನಲ್ಲಿ ಕೊಡಸಲೇಬೇಕು. ಇಲ್ಲವಾದಲ್ಲಿ ಘೇರಾವ ಹಾಕುವುದು ಅನಿವಾರ್ಯ ಎಂದು ತಿಳಿಸಿದರು.
ಸದ್ಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ೩೦೦೦ ರೂ. ಮಾತ್ರ ಘೋಷಣೆ ಮಾಡಿವೆ. ಕಳೆದ ಅವಽಗೂ ಇದೇ ದರ ಘೋಷಣೆ ಮಾಡಲಾಗಿತ್ತು. ಈ ಸಾರಿ ೩೫೦೦ ರೂ. ಗ್ಗಿಂತ ಕಡಿಮೆ ದರವನ್ನು ಯಾವ ಕಬ್ಬು ಬೆಳೆಗಾರರು ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಹಾಗೂ ಅಽಕಾರಿಗಳು ಸಕ್ಕರೆ ಕಾರ್ಖಾನೆಗಳ ಲಾಭಿಗೆ ಮಣಿದು ರೈತರಿಗೆ ಬರೇ ಎಳೆಯುತ್ತಿದ್ದಾರೆ. ಎಚ್‌ಎನ್‌ಟಿ(ಕಟಾವು-ಸಾಗಣೆ) ಹೆಸರಿನಲ್ಲಿ ೮೦೦ ರಿಂದ ೧೦೦೦ ಸಾವಿರ ವರೆಗೆ ಕಡಿತ ಮಾಡುತ್ತಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದೇ ಕಾರಣಕ್ಕೆ ಸಿಎಂ ಜಿಲ್ಲೆಗೆ ಆಗಮಿಸುವ ದಿನದಿಂದ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ. ಅಂದು ಗದ್ದನಕೇರಿ ಕ್ರಾಸ್ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ರೈತ ಮುಖಂಡರು, ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗೆ ಸ್ಪಂದಿಸಬೇಕು. ಕಾರ್ಯಕರಮಕ್ಕೂ ನಮ್ಮ ಯಾವುದೇ ಅಭ್ಯಂತರವಿಲ್ಲ. ಅವರು ಸ್ಥಳಕ್ಕೆ ಆಗಮಿಸಿ ಸ್ಪಂದಿಸದೇ ಹೋದರೇ ಕಾರ್ಯಕ್ರಮಕ್ಕೆ ರೈತರೇ ಧಾವಿಸುವುದು ನಿಶ್ಚಿತ ಎಂದು ತಿಳಿಸಿದ ಅವರು, ಕಾರ್ಖಾನೆಗಳು ನಮ್ಮ ಶತೃಗಳಲ್ಲ. ನಾವು ಅವರ ಶತೃಗಳಲ್ಲ. ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆ ಪರಿಹರಿಸಬೇಕು. ಆಗ ಇಬ್ಬರಿಗೂ ಅನುಕೂಲ. ಇದನ್ನು ಮಾಡದೇ ರೈತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೇ. ಇದಕ್ಕೆ ಸರ್ಕಾರವೇ ಹೊಣೆ. ಸರ್ಕಾರಕ್ಕೆ ಅಽಕ ಆದಾಯ ತಂದು ಕೊಡುವ ಅಬಕಾರಿ ಸುಂಕ. ಮದ್ಯಕ್ಕೆ ಹೋಗುವ ಸರಂಜಾಮು ಕಬ್ಬು ಬೆಳೆಗಾರರಿಂದ ಹೋಗುತ್ತದೆ ಎನ್ನುವುದು ಮರೆಬಾರದು. ಆದರು ಸಹ ಸರ್ಕಾರ ರೈತರ ನೆರವಿಗೆ ಬಾರದೇ ಸಕ್ಕರೆ ಲಾಭಿಗೆ ಮಣಿಯುತ್ತಿರುವುದು ರೈತರ ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ನಿರಾಣಿ ಕಾರ್ಖಾನೆಯವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರ ಈ ಕ್ರಮ ಸರಿಯಲ್ಲ ಎಂದು ತಿಳಿಸಿದರು.
ಮುಖಂಡರಾದ ಈರಪ್ಪ ಹಂಚಿನಾಳ, ಗೋವಿಂದಪ್ಪ ಮೆಟಗುಡ್ಡ, ಗಂಗಪ್ಪ ಮಾದರ, ಬಸವರಾಜ ಗೋನಾಳ, ರಾಜೇಂದ್ರ ಪಾಟೀಲ ಇದ್ದರು.