ಮೈಸೂರು: ರಾಜ್ಯದಲ್ಲಿರುವ ಸುಮಾರು 11,133 ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸಲು ಶೀಘ್ರದಲ್ಲೇ ನಗರದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕಾಯ್ದೆ ರಾಜ್ಯ ಉಸ್ತುವಾರಿ ಸಮಿತಿ ಸದಸ್ಯ ಎಂ.ವಿ. ವೆಂಕಟೇಶ್ ತಿಳಿಸಿದರು.
3 ತಿಂಗಳ ಹಿಂದೆ ತಮ್ಮನ್ನು ಒಳಗೊಂಡ ಸಮಿತಿ ವರದಿ ಆಧರಿಸಿ ನೇರ ಪಾವತಿ ವ್ಯವಸ್ಥೆಯಲ್ಲಿರುವ ಗುತ್ತಿಗೆ ಪೌರಕಾರ್ಮಿಕರ ಸೇವೆ ಕಾಯಂಗೊಳಿಸಲಾಗುತ್ತಿದೆ. ಮುಂದಿನ ವಾರದೊಳಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಕುರಿತ ಆದೇಶ ಪತ್ರ ತಲುಪಲಿದೆ. ಜತೆಗೆ ಇದೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಪೌರಕಾರ್ಮಿಕ ಮಹಿಳೆಯೊಬ್ಬರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.