ಜಿಲ್ಲೆ

ಸಿಎಂ ಸ್ಥಾನಕ್ಕೆ ಸಿದ್ದು ರಾಜೀನಾಮೆ ನೀಡಲಿ

ಚಿತ್ರದುರ್ಗ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಒಂದು ರೂ. ಅಭಿವೃದ್ಧಿ ಕೆಲಸ ಮಾಡದೆ ಭ್ರಷ್ಟಾಚಾರ, ಸ್ವಜನಪಕ್ಷ ಪಾತದಲ್ಲಿ ಮುಳುಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಭ್ರಷ್ಟಾಚಾರ ಸಹಿಸಲ್ಲ, ಸಚ್ಚಾರಿತ್ರ್ಯವಂತನೆಂದು ಕರೆದುಕೊಳ್ಳುವ ಸಿದ್ದರಾಮಯ್ಯ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿವೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣ ಹಾಗೂ ಮುಡಾದ ನಿವೇಶನ ಹಗರಣ ತನಿಖೆಗೆ ಸಹಕರಿಸಲಿ. ಎರಡೂ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸುವ ಮೂಲಕ ತಾವು ಸಾಚಾ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲಿ ಎಂದು ಒತ್ತಾಯಿಸಿದರು.
ಯಾವುದೇ ಭ್ರಷ್ಟಾಚಾರ ನಡೆದಿಲ್ಲವೆಂದು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಡಾದಲ್ಲಿ ಹಗರಣವಾಗಿಲ್ಲ ಎಂದಾದರೆ ಸಚಿವ ಬೈರತಿ ಸುರೇಶ್ ಯಾಕೆ ಹಲವು ಅಧಿಕಾರಿಗಳನ್ನು 24 ಗಂಟೆಯೊಳಗೆ ವರ್ಗಾವಣೆ ಮಾಡಿದರು? ಯಾಕೆ ಬೆಂಗಳೂರಿಗೆ ಕಡತಗಳನ್ನು ತೆಗೆದುಕೊಂಡು ಹೋದರು? ಮುಡಾ ದಾಖಲೆಗಳನ್ನು ನಾಶಪಡಿಸಿ ಸರ್ಕಾರ ಹಗರಣ ಮುಚ್ಚಿಹಾಕಲು ಸಂಚು ನಡೆಸಿದೆ ಎಂದು ದೂರಿದರು.
ವಾಲ್ಮೀಕಿ ನಿಗಮದ ಹಣ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೇನಾಮಿ ಖಾತೆಗೆ ಜಮಾ ಮತ್ತು ಅಂತಾರಾಜ್ಯದಲ್ಲಿ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿದೆ. ಕೇಂದ್ರ ಸರ್ಕಾರ ಇಡಿ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪದೇ ಪದೆ ಆರೋಪಿಸುತ್ತಿರುವುದು ಸರಿಯಲ್ಲ ಎಂದರು.
ಈ ಹಿಂದೆ ಈ ಸಂಸ್ಥೆಗಳು ಸಾವಿರಾರು ಪ್ರಕರಣಗಳ ತನಿಖೆ ನಡೆಸಿವೆ. ಹಾಗಾದರೆ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಈ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿತ್ತೇ ಎಂದು ಪ್ರಶ್ನಿಸಿದರು.
ಎಲ್ಲ ಜಿಲ್ಲೆ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಆಗಿರಬಹುದಾದ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲಿ ಎಂದು ಒತ್ತಾಯಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ವೆಂಕಟೇಶ್ ಯಾದವ್, ರಾಮರೆಡ್ಡಿ, ತಿಪ್ಪೇಸ್ವಾಮಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇದ್ದರು.

*ಕೆಸರಾಗಿದೆ ಸಿದ್ದರಾಮಯ್ಯ ಕೈ
ಸಿದ್ದರಾಮಯ್ಯ ಸದನದಲ್ಲಿ ಪ್ರಶ್ನಿಸುವ ಸದಸ್ಯರನ್ನು ಬೆದರಿಸುತ್ತಾರೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ದೂರಿದರು. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಾಗುವುದು. ಮೈಸೂರಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮೈಸೂರಲ್ಲಿ 62 ಸಾವಿರ ಅರ್ಜಿದಾರರು ಮುಡಾದ ನಿವೇಶನಕ್ಕಾಗಿ ಕಾಯುತ್ತಿದ್ದಾರೆ ಎಂದ ಅವರು, ಕೆಸರೆ ಜಮೀನು ವಿಚಾರದಲ್ಲಿ ಸಿದ್ದರಾಮಯ್ಯ ಅವರ ಕೈ ಕೆಸರಾಗಿದೆ. ಈ ಹಿಂದಿನ ತಮ್ಮ ಅಧಿಕಾರಾವಧಿವಲ್ಲಿ ಸಿದ್ದರಾಮಯ್ಯ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದಿದ್ದಾಗ ಲೋಕಾಯುಕ್ತವನ್ನೇ ಮುಚ್ಚಿ, ಎಸಿಬಿ ರಚಿಸಿ ಬಚಾವ್ ಆಗಿದ್ದರು ಎಂದು ಆಪಾದಿಸಿದರು.