ಜಿಲ್ಲೆ

ಸಿಎಂ ಸ್ಥಾನಕ್ಕೆ ಡಿಕೆಶಿ ಮೊದಲಿನಿಂದಲೂ ರೇಸ್​ನಲ್ಲಿ ಇದ್ದಾರೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈವಾಗ ಅಲ್ಲ, ಮೊದಲಿನಿಂದಲೂ ಸಿಎಂ ಸ್ಥಾನದ ರೇಸ್​ನಲ್ಲಿ ಇದ್ದಾರೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಆದರೆ, ವರಿಷ್ಠರು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆ ಸಮಯಕ್ಕೆ ಕಾಯಬೇಕು. ಕಾದು ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ನಾನು ಸಚಿವ ಸಂಪುಟದಲ್ಲಿ ಒಬ್ಬ ಮಂತ್ರಿ ಅಷ್ಟೇ. ತಮ್ಮವರು ಸಿಎಂ, ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವರು ಆಗಬೇಕು ಎಂದು ಬೆಂಬಲಿಗರು ಬಯಸುವುದು ಸ್ವಾಭಾವಿಕ. ಆದರೆ, ವರಿಷ್ಠರು ನಿರ್ಧಾರ ಮಾಡಬೇಕಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಈಗಾಗಲೇ ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ಆಗಿಲ್ಲ. ಸಮಯ ಬಂದಾಗ ನೋಡೋಣ. ನಾನಂತೂ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು..

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕೇವಲ 14 ಸೈಟ್​ಗಳ ಬಗ್ಗೆ ಬಿಜೆಪಿ ಪ್ರಸ್ತಾಪ ಮಾಡುತ್ತಿರುವುದೇ ರಾಜಕೀಯ. ಇಲ್ಲಿ 2000 ಸೈಟ್​ಗಳು ಹಂಚಿಕೆ ಆಗಿವೆ, ಆ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ವಿಳಂಬ ಆಗಿರಬಹುದು. ಸರ್ಕಾರಿ ಯೋಜನೆಗಳಲ್ಲಿ ವಿಳಂಬವಾಗುವುದು ಸ್ವಾಭಾವಿಕ. ನಾವು ಇದೇ ದಿನ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಎರಡು ತಿಂಗಳದ್ದನ್ನು ಸೇರಿ ಒಟ್ಟಿಗೆ ಹಣ ಕೊಟ್ಟಿದ್ದೇವೆ ಎಂದರು.