ಜಿಲ್ಲೆ

ಸಿಎಂ ಸಿದ್ದು ರಾಜೀನಾಮೆಗೆ ಆಗ್ರಹ

ಚಿತ್ರದುರ್ಗ: ಮುಡಾ ಪ್ರಕರಣದ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಮೆರವಣಿಗೆ ನಡೆಸಿದರು. ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು. ಭ್ರಷ್ಟ ಸಿಎಂ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಹಠಾವೋ ಮುಡಾ ಬಚಾವೋ, ಕಾಂಗ್ರೆಸ್ ತೊಲಗಿಸಿ, ಕರ್ನಾಟಕ ಉಳಿಸಿ ಎಂದು ಘೋಷಣೆ ಕೂಗಿದರು.

ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಹೈಕೋರ್ಟ್ ಸಿದ್ದರಾಮಯ್ಯ ಅವರ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕಳಂಕರಹಿತ ಸಿಎಂ ಎಂಬುದನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ, ಕುಟುಂಬ ರಾಜಕಾರಣದಲ್ಲಿ ಸಿಲುಕಿ, ಕಳಂಕಿತ ಸಿಎಂ ಎಂಬ ಪಟ್ಟಿಗೆ ಸೇರಬೇಕಾಗುತ್ತದೆ ಎಂದರು.

ಮುಡಾದಲ್ಲಿ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಿನಲ್ಲಿ 3.5 ಲಕ್ಷ ರೂ.ಗೆ ಜಮೀನು ಖರೀದಿಸಿ ಅದರಿಂದ 67 ಕೋಟಿ ರೂ. ಕಬಳಿಸಿದ್ದಾರೆ. ಇದು ಪ್ರಜಾಸತ್ತಾತ್ಮಕವಾಗಿ ನಾಡಿಗೆ ಮಾಡಿದ ದ್ರೋಹವಾಗಿದ್ದು, ಇದನ್ನು ರಾಜ್ಯದ ಜನರು ಒಪ್ಪುವುದಿಲ್ಲ. ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಈ ಹಿಂದಿನ ಮುಖ್ಯಮಂತ್ರಿಗಳು ತಮ್ಮ ಮೇಲೆ ಆರೋಪ ಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆ ನಡೆಯಲು ಅವಕಾಶ ಕಲ್ಪಿಸಿದ್ದರು. ಅದೇ ರೀತಿ ಸಿದ್ದರಾಮಯ್ಯ ಕೂಡ ನಡೆದುಕೊಳ್ಳಬೇಕು. ತನಿಖೆ ಬಳಿಕ ತಪ್ಪಿತಸ್ಥರಲ್ಲದಿದ್ದರೆ, ಪುನಾ ಅಧಿಕಾರ ಪಡೆಯಲಿ. ಈಗ ರಾಜೀನಾಮೆ ನೀಡಲಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್, ಮಲ್ಲಿಕಾರ್ಜುನ್, ಸಂಪತ್‌ಕುಮಾರ್, ವೆಂಕಟೇಶ್ ಯಾದವ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಡಾ.ಸಿದ್ದಾರ್ಥ ಗುಂಡಾರ್ಪಿ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ರವಿಕುಮಾರ್, ಚಂದ್ರಿಕಾ ಲೋಕನಾಥ್, ಶಾಂತಮ್ಮ, ವೀಣಾ, ಅನ್ನಪೂರ್ಣಮ್ಮ, ಶೈಲಜಾ ರೆಡ್ಡಿ, ಶೀಲಾ ಇತರರಿದ್ದರು.