ಜಿಲ್ಲೆ

ಸಿಎಂ ಸಿದ್ದರಾಮಯ್ಯ ಪರ ಬೈಕ್ ರ್ಯಾಲಿ

ಚಿತ್ರದುರ್ಗ: ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಬೈಕ್ ರ್ಯಾಲಿ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಿಎಂ ವಿರುದ್ಧ ಪಾದಯಾತ್ರೆ ಹೊರಟಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ನಡೆಗೆ ಅಸಮಾಧಾನ ಹೊರಹಾಕಿದರು.

ನಂತರ ಅಲ್ಲಿಂದ ಹೊರಟ ರ್ಯಾಲಿ ಮದಕರಿನಾಯಕ ವೃತ್ತ, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಸಂಗೊಳ್ಳಿ ರಾಯಣ್ಣ, ಗಾಂಧಿವೃತ್ತ, ಹೊರಪೇಟೆ, ಜೆಸಿಆರ್ ಬಡಾವಣೆ, ತಿಪ್ಪಜ್ಜಿ ಸರ್ಕಲ್ ಮಾರ್ಗವಾಗಿ ಸಂಚರಿಸಿ ಒನಕೆ ಓಬವ್ವ ವೃತ್ತದಲ್ಲಿ ಕೊನೆಗೊಂಡಿತು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ರಾಜ್ಯಪಾಲರು ಸಿಎಂಗೆ ನೀಡಿರುವ ನೋಟಿಸ್ ಆ. 5ರ ಸಂಜೆಯೊಳಗೆ ಹಿಂಪಡೆಯದಿದ್ದರೆ, ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿ ಪ್ರತಿಭಟಿಸುತ್ತೇವೆ. ಗೋ ಬ್ಯಾಕ್ ರಾಜ್ಯಪಾಲರೆಂದು ಅಧಿಕಾರದಿಂದ ಕೆಳಗಿಳಿಯುವತನಕ ಹೋರಾಡುತ್ತೇವೆ ಎಂದು ಎಚ್ಚರಿಸಿದರು.

ಮುಖಂಡ ಆರ್.ಕೆ.ಸರ್ದಾರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಆಡಳಿತ ಸಹಿಸದೆ, ವಿರೋಧ ಪಕ್ಷಗಳು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರಕ್ಕೆ ಮುಂದಾಗಿದ್ದು, ಇದರ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಿಡಿಕಾರಿದರು.

ಕುರುಬ ಸಮಾಜದ ಮುಖಂಡ ಬಿ.ಟಿ.ಜಗದೀಶ್ ಮಾತನಾಡಿ, ಸಿಎಂ ರಾಜ್ಯದ ಬಡವರ ಪರ ಇರುವುದನ್ನು ಸಹಿಸಿಕೊಳ್ಳಲಾಗದೆ ವಿರೋಧ ಪಕ್ಷಗಳು ರಾಜೀನಾಮೆಗೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅಹಿಂದ, ಶೋಷಿತ ಸಮುದಾಯಗಳು ಸಿದ್ದರಾಮಯ್ಯ ಪರವಾಗಿದ್ದು, ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ ಶ್ರೀರಾಮ್, ಆರ್.ನರಸಿಂಹರಾಜು, ಸೈಯದ್ ವಲಿಖಾದ್ರಿ, ಅಬ್ದುಲ್ಲಾ, ಎ.ಸಾಧಿಕ್‌ವುಲ್ಲಾ, ಮೈಲಾರಪ್ಪ, ಉಮಣ್ಣ, ಎಸ್.ಎನ್.ರವಿಕುಮಾರ್, ಮುತ್ತುರಾಜ್, ಎಸ್‌ಬಿಎಲ್ ಮಲ್ಲಿಕಾರ್ಜುನ್, ಹನೀಸ್, ರವೀಂದ್ರ, ಖಾನ್‌ಸಾಬ್, ಕುರಿನಾಗರಾಜ್, ಸಲ್ಮಾನ್, ಸತೀಶ್, ಉಮೇಶ್, ಜಿ.ಟಿ.ಮಂಜುನಾಥ್, ಆರ್.ಶಿವಣ್ಣ ಇತರರಿದ್ದರು.