ಕೊರಟಗೆರೆ: ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಸೇರಿ ರಾಜ್ಯ ಸರ್ಕಾರದ ವಿವಿಧ ಸಚಿವರನ್ನು ಅವಾಚ್ಯವಾಗಿ ನಿಂದಿಸಿ, ವೈಯಕ್ತಿಕ ತೇಜೋವಧೆ ಮಾಡುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೋಹಿತ್ ನರಸಿಂಹಮೂರ್ತಿ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ವಿವಿಧ ವಿರುದ್ಧ ಸದಾ ಕೆಂಡಕಾರುತ್ತಿದ್ದ ನೆಲಮಂಗಲ ತಾಲೂಕು ನಲೂರಿನ ಮೋಹಿತ್ 1 ಹಾಗೂ 2 ನಿಮಿಷದ ಎರಡು ಪ್ರತ್ಯೇಕ ವಿಡಿಯೋ ಮಾಡಿ ಹರಿಬಿಟ್ಟಿದ್ದ.ಈ ಬಗ್ಗೆ ಕೊರಟಗೆರೆ ಠಾಣೆಯಲ್ಲಿ ಕೊರಟಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ದೂರು ನೀಡಿದ್ದರು. ಗೃಹ ಸಚಿವರ ವಿರುದ್ಧದ ಪೋಸ್ಟ್ ಎಂಬ ಕಾರಣದಿಂದ ಪ್ರಕರಣವನ್ನುಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮೋಹಿತ್ ನರಸಿಂಹಮೂರ್ತಿ ಪ್ರಸ್ತುತ ಉತ್ತರಾಖಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾದ್ದು, ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ರಾಜ್ಯ ಸರ್ಕಾರ ಮತ್ತು ಸಚಿವರ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಪಿಐಗಳಾದ ಅವಿನಾಶ್, ರಾಘವೇಂದ್ರ, ಪಿಎಸ್ಐ ಚೇತನಗೌಡ, ಸಿಬ್ಬಂದಿ ದೊಡ್ಡಲಿಂಗಪ್ಪ, ಸಿದ್ದರಾಮ ಭಾಗವಹಿಸಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರೋಪಿ!: 2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೋಹಿತ್ ವಿರುದ್ಧ ರಾಜ್ಯದ 10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೊರಟಗೆರೆ, ಮೈಸೂರು, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆರೋಪಿ ಮೊಹಿತ್ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆಯಡಿ ಒಟ್ಟು 12ಪ್ರಕರಣ ದಾಖಲಾಗಿವೆ. ಇದಲ್ಲದೇ ಉತ್ತರಾಖಂಡದ ಚಾರದಾಮ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10ಜನ ಭಕ್ತರಿಗೆ
ಪಂಗನಾಮ ಹಾಕಿರುವ ಹಿನ್ನೆಲೆಯಲ್ಲಿಯೂ 3 ಪ್ರಕರಣ ವಿವಿಧ ಠಾಣೆಯಲ್ಲಿವೆ.