ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತ ದಾವಣಗೆರೆ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ‘ಮಸೀದಿ ಕಡೆ ಸಿದ್ದು ನಡೆ’ ಎಂಬ ಶೀರ್ಷಿಕೆಯಡಿ ಸೆ. 28ರಂದು ಚಿತ್ರವೊಂದನ್ನು ಹಾಕಿ, ಅನೇಕರಿಗೆ ಶೇರ್ ಮಾಡಲಾಗಿದೆ. ಇದು ಮುಖ್ಯಮಂತ್ರಿಯನ್ನು ಅವಮಾನಿಸುವುದು ಹಾಗೂ ಕೋಮುಭಾವನೆ ಕೆರಳಿಸುವ ಉದ್ದೇಶವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶ ಹಾಗೂ ಜಿಲ್ಲೆಯ ಶಾಂತಿ ಕದಡುವ ಹುನ್ನಾರ ಅಡಗಿದೆ. ಈ ಬಗ್ಗೆ ಗೃಹ, ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಲ್ಲದೇ ಪೂರ್ವವಲಯದ ಐಜಿಪಿ ಅವರಿಗೂ ಹಾಗೂ ಸೈಬರ್ ಅಪರಾಧ ಠಾಣೆಗೂ ದೂರು ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಿಜೆಪಿ ಸಿಎಂ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಅಭಿಮಾನಿಗಳಿಗೆ ಬೇಸರವಾಗಿದೆ. ಇಂತಹ ದುಷ್ಟಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿ ನಂತರದಲ್ಲಿ ಡಿ. ಬಸವರಾಜ್ ಹಾಗೂ ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್ ನೇತೃತ್ವದ ಕಾಂಗ್ರೆಸ್ ನಿಯೋಗ, ಎಸ್ಪಿ ಉಮಾ ಪ್ರಶಾಂತ್ ಅವರಿಗೆ ದೂರು ಸಲ್ಲಿಸಿತು.
ಮುಖಂಡರಾದ ಕೆ. ಎಂ.ಮಂಜುನಾಥ್, ಎಂ.ಕೆ. ಲಿಯಾಕತ್ ಅಲಿ, ಮಹಮ್ಮದ್ ಜಿಕ್ರಿಯಾ, ಡಿ. ಶಿವಕುಮಾರ್, ನವೀನ್‌ಕುಮಾರ್, ಮುಬಾರಕ್ ಇದ್ದರು.