ಜಿಲ್ಲೆ

ಸಿಎಂ ಮಧ್ಯ ಪ್ರವೇಶಿಸಿ ಬೇಡಿಕೆ ಈಡೇರಿಸಲಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ತಪ್ಪಿದಲ್ಲಿ ಜನವರಿ 1ರಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಲಾಗುವುದು ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರ ನಡೆಸುವ ಬಗ್ಗೆ ಕರಾರಸಾ ನಿಗಮಗಳ ಕಾರ್ವಿುಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಈಗಾಗಲೇ ನಾಲ್ಕು ನಿಗಮಗಳ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದೇವೆ. ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮುಖ್ಯಮಂತ್ರಿಯವರಿಗೆ ನೌಕರರ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸಾರಿಗೆ ಸಚಿವರು ಸಂಘಟನೆಗಳ ಜತೆ ಸಭೆ ನಡೆಸಿ ಡಿ. 31ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವರು ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಸದನದಲ್ಲಿ ಉತ್ತರ ನೀಡಿದ್ದರು. ಆದರೆ, ಇಲ್ಲಿಯವರೆಗೂ ನಮ್ಮೊಂದಿಗೆ ಸಭೆ ನಡೆಸಿಲ್ಲ ಎಂದು ಹೇಳಿದರು.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಶೇ. 25 ರಷ್ಟು ವೇತನ ಪರಿಷ್ಕರಣೆ ಮಾಡಬೇಕು. ಆದರೆ, 2016-17ರ ಬಳಿಕ ವೇತನ ಪರಿಷ್ಕರಣೆ ಮಾಡಿಲ್ಲ. ಹಿಂದಿನ ವೇತನ ಹೆಚ್ಚಳದ 38 ತಿಂಗಳ ಬಾಕಿ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ. ವೇತನ ಪರಿಷ್ಕರಣೆ ಬಗ್ಗೆ ನಿಗಮಗಳ ಯಾವುದೇ ಯೂನಿಯನ್ ತಮ್ಮೊಂದಿಗೆ ಮಾತುಕತೆ ನಡೆಸಿಲ್ಲ ಎಂಬ ಸಾರಿಗೆ ಸಚಿವರ ಹೇಳಿಕೆ ಸತ್ಯಕ್ಕೆ ದೂರ ಎಂದರು.

ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಿದ ಕೆಲ ದಿನಗಳಲ್ಲಿಯೇ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿದೆ. ಹಾಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂಬುದನ್ನು ಸರ್ಕಾರವೇ ತೋರಿಸಿಕೊಟ್ಟಿದೆ. ಮುಷ್ಕರವನ್ನು ತಪ್ಪಿಸುವ ಮಾಗೋಪಾಯ ಸರ್ಕಾರದ ಬಳಿಯೇ ಇದೆ ಎಂದರು.</p><p>ಸುದ್ದಿಗೋಷ್ಠಿಯಲ್ಲಿ ಜಿ. ಪ್ರಕಾಶಮೂರ್ತಿ, ಆರ್.ಎಫ್. ಕವಳಿಕಾಯಿ, ಕಮಲದಿನ್ನಿ ಇದ್ದರು.