ಜಿಲ್ಲೆ

ಸಿಎಂ ಬಲಾವಣೆಯಿಂದ ಪರಿಸ್ಥಿತಿ ಸುಧಾರಿಸದು - ಸಿ.ಟಿ. ರವಿ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾದರೆ ಸಾಲದು, ಸರ್ಕಾರ ಬದಲಾದರೆ ಮಾತ್ರ ರಾಜ್ಯದ ಪರಿಸ್ಥಿತಿ ಸುಧಾರಿಸಬಲ್ಲದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯಿಂದ ಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಭ್ರಷ್ಟ ಬರುತ್ತಾರೆ. ಕಾಂಗ್ರೆಸ್ ಡಿಎನ್‌ಎನಲ್ಲೇ ಭಷ್ಟಾಚಾರವಿದೆ. ಆ ಪಕ್ಷವೇ ಅಧಿಕಾರದಿಂದ ಹೋಗಬೇಕು ಎಂದರು.

ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದಾರೆ. ಕೆಲ ಸಚಿವರು ಸಹಕಾರ ಸಂಘಗಳ ಚುನಾವಣೆಗಳಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಿಎಂ ಚರ್ಚೆ ನಡೆದಿದೆ. ಯಾರು ಸಿಎಂ ಎಂಬ ಚರ್ಚೆ ಇಲ್ಲಿ ಮುಖ್ಯವಲ್ಲ. ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದ ಸರ್ಕಾರವೇ ಇರುತ್ತದೆ. ಹೀಗಾಗಿ ಯಾರು ಬೇಕಾದರೂ ಸಿಎಂ ಆಗಲಿ.

ಮೊದಲು ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಲಿ. ಸರ್ಕಾರಕ್ಕೆ ಗುತ್ತಿಗೆದಾರರು ಬರೆದ ಪತ್ರ ಓದಿ ನಾಚಿಕೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಗುತ್ತಿಗೆದಾರರ ಪತ್ರ ಸರ್ಕಾರಕ್ಕೆ ಕೊಟ್ಟಿರುವ ಸರ್ಟಿಫಿಕೇಟ್ ಆಗಿದೆ.

ಹೈಕಮಾಂಡ್ ವೀಕ್: ಕಾಂಗ್ರೆಸ್ ಹೈಕಮಾಂಡ್ ಈಗ ಶಕ್ತಿ ಕಳೆದುಕೊಂಡಿದೆ. ನಾನು ಎಂದವರು ಯಾರೂ ಮರುಕ್ಷಣವೇ ಪಕ್ಷದಲ್ಲಿರುತ್ತಿರಲಿಲ್ಲ. ಆದರೆ, ಸಿದ್ದರಾಮಯ್ಯ ಪದೇ ಪದೆ ನಾನೇ ಸಿಎಂ ಎನ್ನುತ್ತಿದ್ದಾರೆ. ಈ ಮೂಲಕ ವರಿಷ್ಠರಿಗೆ ಅವರು ಸಡ್ಡು ಹೊಡೆದಿದ್ದಾರೆ ಎಂದು ದೂರಿದರು.