ಜಿಲ್ಲೆ

ಸಿಎಂ ಬದಲಾವಣೆ ಗಾಳಿ ಸುದ್ದಿ, ಶಾಸಕ ಎಸ್.ಆರ್.ವಿಶ್ವನಾಥ್ ಅಭಿಮತ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ನೆಲಮಂಗಲ: ಮುಖ್ಯಮಂತ್ರಿ ಬದಲಾವಣೆ ಕುರಿತು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ, ಇದಕ್ಕೆ ಕಿವಿಗೊಡಬಾರದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಬೆತ್ತನಗೆರೆ-ನೆಲಮಂಗಲ ರಸ್ತೆ ಹಾಗೂ ಗೌಡಹಳ್ಳಿ- ಕಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೆತುವೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಜನರ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಹಾಗೂ ಮೇಲ್ಸತುವೆ ಅಭಿವೃದ್ಧಿ ಮಾಡಲು ಮುಂದಾಗಿದ್ದು, 2 ತಿಂಗಳ ಒಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ. ಯಲಹಂಕ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಆರ್‌ಡಿಪಿಆರ್‌ನಲ್ಲಿ 70 ಕೋಟಿ ಹಾಗೂ ಪಿಡಬ್ಲ್ಯುಡಿಗೆ 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಸಮುದಾಯ ಭವನ, ಅಂಬೇಡ್ಕರ್ ಭವನ ಕಾಮಗಾರಿಯ ಪಟ್ಟಿ ಮಾಡಲಾಗಿದೆ. ಜತೆಗೆ 25 ಹರಿಜನ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿದ್ದು, ಸ್ಮಶಾನ ಅಭಿವೃದ್ಧಿಗೆ ತಲಾ 25ಲಕ್ಷ ಹಣ ಮಂಜೂರಾಗಿದೆ ಎಂದರು.

ಯಲಹಂಕ ಬಿಜೆಪಿ ಅಧ್ಯಕ್ಷ ಹನುಮಯ್ಯ, ಮಾಧ್ಯಮ ಸಂಚಾಲಕ ಅಭಿಲಾಷ್, ಸಹ ಸಂಚಾಲಕ ಮುಖೇಶ್, ಹುಸ್ಕೂರು ಗ್ರಾಪಂ ಉಪಾಧ್ಯಕ್ಷ ಸೈದಾಮಿಪಾಳ್ಯ ರಮೇಶ್, ಬಿಜೆಪಿ ಮುಖಂಡ ಉದ್ದಂಡಯ್ಯ, ವೆಂಕಟೇಶ್, ನರಸಿಂಹಮೂರ್ತಿ, ನರಸೇಗೌಡ, ಗಂಗರಾಜು, ಕೆ.ನರಸಿಂಹಮೂರ್ತಿ, ಪುಟ್ಟತಿಮ್ಮೇಗೌಡ, ಚಿಕ್ಕಕೆಂಪಯ್ಯ, ಸಿದ್ದಗಂಗಪ್ಪ, ವಿನೋದ್, ರಮೇಶ್, ನಾರಾಯಣ್ ಮತ್ತಿತರರು ಇದ್ದರು.

ವಿವಿಧ ಕಾಮಗಾರಿಗೆ ಚಾಲನೆ: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಬೆತ್ತನಗೆರೆ, ಗೌಡಹಳ್ಳಿ, ಪಿಳ್ಳಹಳ್ಳಿ, ಹುಣ್ಣಿಗೆರೆ, ಸೀಗೆಹಳ್ಳಿ, ಅವೇರಹಳ್ಳಿ, ಲಕ್ಷ್ಮೀಪುರ, ಗಂಗೊಂಡನಹಳ್ಳಿ, ಗಿಡ್ಡೇನಹಳ್ಳಿ, ಕುರುರೆಗೆರೆ, ರಾಜರಾಜೇಶ್ವರಿ ಬಡಾವಣೆ, ಸಂಜೀವಿನಿ ಬಡಾವಣೆ ಸೇರಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು, 2 ಕೋಟಿ ರೂಪಾಯಿ ವೆಚ್ಚದಲ್ಲಿ ಗೌಡಹಳ್ಳಿ- ಕಮ್ಮಸಂದ್ರ ಮೇಲ್ಸೆತುವೆ ಸೇರಿ 12 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು. ಕಮ್ಮಸಂದ್ರದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದರು.

ನಾನೂ ಆಕಾಂಕ್ಷಿ: ನಾನು ಕೂಡ ಸಚಿವ ಆಕಾಂಕ್ಷಿಯಾಗಿದ್ದೇನೆ. ಸಚಿವ ಸ್ಥಾನಕ್ಕೆ ಆಸೆಪಟ್ಟವನಲ್ಲ. ಹಾಗೆಯೇ ಬೇಡ ಎಂದೂ ಹೇಳಿಲ್ಲ. ಬೆಂಗಳೂರು ಅಭಿವೃದ್ಧಿ ಮಾಡಲು ಯಾವುದಾದರೂ ಸಚಿವ ಸ್ಥಾನ ನೀಡಿದರೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಎಸ್.ಆರ್.ವಿಶ್ವನಾಥ್ ತಿಳಿಸಿದರು.