ಜಿಲ್ಲೆ

ಸಿಎಂ ಪರ ಶೋಷಿತ ಒಕ್ಕೂಟದಿಂದ ಪ್ರತಿಭಟನೆ 5ಕ್ಕೆ

ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ಖಂಡಿಸಿ ಆ. 5ರಂದು ಬೆಳಗ್ಗೆ 10.30ಕ್ಕೆ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಹೇಳಿದರು.

ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲೇ ಕಪ್ಪುಚುಕ್ಕೆ ಇಲ್ಲದೆ ಉತ್ತಮ ಆಡಳಿತ ನಡೆಸುತ್ತಿದ್ದು, ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿರುವುದನ್ನು ಸಹಿಸದೆ ಬಿಜೆಪಿ-ಜೆಡಿಎಸ್ ನಾಯಕರು ಷಡ್ಯಂತರ ರೂಪಿಸಿ ಅವರ ತೇಜೋವಧೆ ಮಾಡಲು ಯತ್ನಿಸುತ್ತಿವೆ. ಇದು ಎಂದಿಗೂ ಸಾಧ್ಯವಿಲ್ಲ ಎಂದರು.

ಸಿಎಂ ಪತ್ನಿಗೆ ತವರು ಮನೆಯಿಂದ ನೀಡಿದ್ದ ಭೂಮಿಯನ್ನು ಮೂಡಾ ಭೂಸ್ವಾಧೀನಪಡಿಸಿಕೊಂಡಿತ್ತು. ತವರಿನ ಬಳುವಳಿ ಬಿಟ್ಟುಕೊಡುವ ಮನಸ್ಸಿಲ್ಲದೆ, ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದು, ಅದರಂತೆ 2022ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನಿದೆ ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆಗೊಂಡ ನಂತರ ಅದರ ನಿರ್ವಹಣೆಯ ಜವಾಬ್ದಾರಿ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರದ್ದಾಗಿದೆ. ಇಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೂ ಸಿಎಂಗೂ ಏನು ಸಂಬಂಧ. ತಪ್ಪು ಯಾರೇ ಮಾಡಿರಲಿ ನಿಯಮಾನುಸಾರ ಕ್ರಮವಹಿಸಲು ಎರಡು ಪ್ರಕರಣಗಳನ್ನು ಈಗಾಗಲೇ ಪ್ರತ್ಯೇಕ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿದೆ. ಆದರೂ ವಿರೋಧ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಕೆಟ್ಟ ಹೆಸರು ಬರಲು ಕುತಂತ್ರಕ್ಕೆ ಮುಂದಾಗಿವೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು 200 ಪುಟಗಳ ದೂರನ್ನು ಪರಿಶೀಲಿಸದೆ, ಕೇಂದ್ರ ಸರ್ಕಾರ ಬಳಸಿಕೊಂಡು, ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಅವರಿಂದ ಕೇವಲ 6 ಗಂಟೆಯಲ್ಲಿ ನೋಟಿಸ್ ಜಾರಿ ಮಾಡಿರುವುದು ಇಡೀ ರಾಜ್ಯದ ಜನತೆಗೆ ನೋವುಂಟಾಗಿದೆ. ಇದು ಖಂಡನೀಯ ಎಂದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಶೋಷಿತರು ಸೇರಿ ಎಲ್ಲ ಸಮುದಾಯದ ಬಡವರು ಸಿದ್ದರಾಮಯ್ಯ ಅವರ ಬೆನ್ನೆಲುಬಾಗಿ ನಿಂತಿದ್ದು, ವಿಪಕ್ಷಗಳ ಆರೋಪಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ದುರುಗೇಶಪ್ಪ ಮಾತನಾಡಿ, ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು, ಸಮ-ಸಮಾಜ ನಿರ್ಮಾಣದ ಕನಸನ್ನು ಈಡೇರಿಸಲು ಬಸವಾದಿ ಶರಣರ ಹಾದಿಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಆಡಳಿತಕ್ಕೆ ತೊಂದರೆ ಉಂಟು ಮಾಡಲು ರಾಜ್ಯಪಾಲರ ಏಕಪಕ್ಷೀಯ ನಡೆ ಖಂಡನೀಯ ಎಂದರು.

ಖಾನ್‌ಸಾಬ್ ಮಾತನಾಡಿ, ಅಲ್ಪಸಂಖ್ಯಾತ ಸೇರಿ ಎಲ್ಲ ಸಮುದಾಯದ ಪರವಾಗಿ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದು, ಅವರಿಗೆ ತೊಂದರೆ ನೀಡಿದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಂಡು ವಿರೋಧ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿವಿಧ ಸಮುದಾಯದ ಮುಖಂಡರಾದ ಎಚ್.ಮಂಜಪ್ಪ, ಮೂರ್ತಿ, ಪ್ರಕಾಶ್‌ಮೂರ್ತಿ, ರಮೇಶ್, ಟಿಪ್ಪು ಖಾಸಿಂ ಆಲಿ, ಲಕ್ಷ್ಮಿಕಾಂತ್, ಶ್ರೀರಾಮ್, ಪಿ.ಕೆ.ಮೀನಾಕ್ಷಿ, ಮುನೀರಾ ಮಕಂದರ್, ರವಿಪೂಜಾರ್, ಎನ್.ಡಿ.ಕುಮಾರ್, ಯಾಸೀನ್, ಮೃತ್ಯುಂಜಯ, ಮಾಲ್ತೇಶ್, ಜಾಕೀರ್ ಹುಸೇನ್, ಟಿ.ಶಫೀವುಲ್ಲಾ, ಕಬಲಾಹುಸೇನ್, ವಲಿಖಾದ್ರಿ, ಪ್ರಕಾಶ್ ರಾಮನಾಯ್ಕ್, ಶಿವಣ್ಣ, ಸೈಯದ್ ಖುದ್ದೂಸ್, ಬಿ.ಟಿ.ಜಗದೀಶ್, ಮೈಲಾರಪ್ಪ, ಪೈಲ್ವಾನ್ ತಿಮ್ಮಣ್ಣ, ಹುಲ್ಲೂರು ಮಂಜುನಾಥ್ ಇತರರಿದ್ದರು.