ಚಿತ್ರದುರ್ಗ: ಆರ್‌ಸಿಬಿ ಐಪಿಎಲ್ ಗೆಲುವು ಸಂಭ್ರಮಾಚರಣೆ ವೇಳೆ ಬೆಂಗಳೂರಲ್ಲಿ ಕಾಲ್ತುಳಿತದಿಂದ 11 ಜನರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಟ್ರೋಫಿ ಗೆದ್ದ ತಂಡದ ಸನ್ಮಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್. ಕರಿಬಸವನಗೌಡರು ಕೊಟ್ಟಿದ್ದ ಎಚ್ಚರಿಕೆ ನಡುವೆಯೂ ಆತುರಾತುರವಾಗಿ ಸಮಾರಂಭ ಆಯೋಜಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ನಿರ್ಧಾರ ಸಾವು-ನೋವಿನ ಘಟನೆಗೆ ಕಾರಣವಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪುಕ್ಕಟ್ಟೆ ಪ್ರಚಾರ ಪ್ರಿಯ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿಲುವಿನಿಂದ ಕರುಳ ಕುಡಿಗಳ ಕಳೆದುಕೊಂಡ ಕುಟುಂಬಗಳ ಆಕ್ರಂದನ ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಗಿದೆ. ಪ್ರಕರಣದಲ್ಲಿ ಸರ್ಕಾರ, ಪೊಲೀಸ್, ಕೆಎಸ್‌ಸಿಎ, ಆರ್‌ಸಿಬಿ ಮ್ಯಾನೇಜ್ ಮೆಂಟ್ ಹಾಗೂ ಜನರ ಅತಿರೇಕದ ನಡವಳಿಕೆ ಸೇರಿ ಹಲವು ಹಂತಗಳಲ್ಲಿ ಲೋಪಗಳಾಗಿವೆ.
ಸರ್ಕಾರ ಬಹುವಿಧದ ತನಿಖೆಗಳಿಗೆ ಆದೇಶಿಸಿದೆ. ಆದರೆ, ಹಲವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವುದು ಅಕ್ಷಮ್ಯ. ಅಧಿಕಾರಿಗಳ ಮೇಲೆ ದರ್ಪ ತೋರುವ ಸಿಎಂ ಸಿದ್ದರಾಮಯ್ಯ ಹಾಗೂ ತಾವೇ ಐಪಿಎಲ್ ಟ್ರೋಫಿ ಜಯಿಸಿದ್ದೇನೆ ಎಂಬಂತೆ ವರ್ತಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಬೇಜವಾಬ್ದಾರಿ ಒಪ್ಪಿಕೊಳ್ಳದಿರುವುದು ದುರದೃಷ್ಟಕರ.
ಈ ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಅತ್ಯಂತ ಹೆಚ್ಚು ಜನ ಸಂದಣಿ ಕಾರ್ಯಕ್ರಮಗಳಲ್ಲಿ ಕಾಲ್ತುಳಿತದಿಂದ ನೂರಾರು ಜನರು ಅಸು ನೀಗಿರುವ ಘಟನೆಗಳ ಉದಾಹರಣೆಗಳಿದ್ದರೂ ಮುಂಜಾಗ್ರತೆ ಕ್ರಮ ವಹಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸೂಕ್ತ ತನಿಖೆ ನಡೆಸದೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿರುವ ಪರಿಷತ್ ಕಾರ್ಯಕರ್ತರು ನೈತಿಕ ಹೊಣೆಗಾರಿಕೆಯಿಂದ ನುಣಚಿಕೊಳ್ಳಬಾರದು ಎಂದು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವ ಡಾ.ಜಿ.ಪ ರಮೇಶ್ವರ ಅವರನ್ನು ಆಗ್ರಹಿಸಿದ್ದಾರೆ.
ಪರಿಷತ್ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ, ತಾಲೂಕು ಸಂಚಾಲಕ ವಿಕಾಸ್, ಕಾರ್ಯಕರ್ತರಾದ ಜೀವನ್, ಮಧು, ದರ್ಶನ್, ಆರ್ದಶ್ ಇತರರು ಇದ್ದರು.