ಬಾಗಲಕೋಟೆ ನಗರದ ನ್ಯೂ ಐಬಿಯಲ್ಲಿ ರೈತ ಮುಖಂಡರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಶನಿವಾರ ಸಭೆ ನಡೆಸಿದರು. 
ಜಿಲ್ಲೆ

ಸಿಎಂ ಜೊತೆ ಚರ್ಚೆಗೆ ಕಾಲಾವಕಾಶದ ಭರವಸೆ

ಬಾಗಲಕೋಟೆ: ನಗರದಲ್ಲಿ ನಡೆಯುವ ಸಹಕಾರ ಸಪ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರು ಭಾಗವಹಿಸುವ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದ ರೈತ ಮುಖಂಡರು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದ್ದಾರೆ.

ಕಬ್ಬಿನ ಬೆಲೆ ವಿಚಾರವಾಗಿ ಟನ್ ಗೆ ೩ ಸಾವಿರ ರೂ. ಘೋಷಿಸಿರುವ ಕಾರ್ಖಾನೆಗಳ ದರ ನಿಗದಿಗೆ ತಮಗೆ ಒಪ್ಪಿಗೆ ಇಲ್ಲ. ಟನ್ ಗೆ ೩೫೦೦ ರೂ. ಕೊಡೆಸಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಶನಿವಾರ ನಗರದ ಐಬಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ರೈತ ಮುಖಂಡರ ಜೊತೆ ಸಭೆ ನಡೆಸಿದರು. ಈ ವೇಳೆ ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಲು ಸಮಯಾವಕಾಶ ಕಲ್ಪಿಸಿಕೊಡಲಾಗುವುದು. ಆದರೆ, ಗದ್ದನಕೇರಿ ಕ್ರಾಸ್ ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕೈಬಿಡಿ, ಸಿಎಂ ಭಾಗವಹಿಸುವ ಕಾರ್ಯಕ್ರಮದತ್ತ ತೆರಳಿ ಪ್ರತಿಭಟನೆ ನಡೆಸಬೇಡಿ ಎಂದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವೂ ರೈತರ ಪರವಾಗಿ ಇದೆ. ನಿಮ್ಮ ಬೇಡಿಕೆಯನ್ನು ಸಿಎಂ ಎದುರು ಮಂಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ರೈತ ಮುಖಂಡರು ಅದಕ್ಕೆ ಒಪ್ಪಿ ನಾಳೆ ಕರೆ ನೀಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ರೈತ ಸಮಸ್ಯೆ ಆಲಿಸಲು ಈಗಾಗಲೇ ಜಿಲ್ಲಾಽಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ರೈತರ ಮೂರು ಸಭೆಗಳನ್ನು ನಡೆಸಿದ್ದಾರೆ. ಇದೀಗ ಸಿಎಂ ಜೊತೆ ಮಾತನಾಡಬೇಕು ಎನ್ನುವ ನಿಮ್ಮ ಮನವಿಗೆ ಸ್ಪಂದಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಶ್ರೀಶೈಲ ನಾಯಕ, ಈರಪ್ಪ ಹಂಚಿನಾಳ, ಗೋವಿಂದಪ್ಪ ಮೆಟಗುಡ್ಡ, ಶಿವನಗೌಡ ಪಾಟೀಲ, ಬಿ.ಎಂ.ನದಾಫ ಬಸವರಾಜ ಗೋನಾಳ, ಗುರು ಗಾಣಗೇರ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ನಾಗೇಶ ಗೋಲಶೆಟ್ಟಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.