ಜಿಲ್ಲೆ

ಸಿಎಂ ಖುಷಿಗೊ, ಕೆಲಸ ಮಾಡಿಸಿಕೊಳ್ಳಲೊ ಹೀಗೆ ಹೇಳಿರಬೇಕು: ಎ.ಮಂಜು

ಹಾಸನ: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡರು ಮುಖ್ಯಮಂತ್ರಿಗಳನ್ನು ಖುಷಿ ಪಡಿಸಲೊ ಅಥವಾ ಅವರಿಂದ ಕೆಲಸ ಮಾಡಿಸಿಕೊಳ್ಳಲು ಸಿಎಂ ಪರ ಬ್ಯಾಟಿಂಗ್ ಮಾಡಿರಬಹುದು ಎಂದು ಮಾಜಿ ಸಚಿವ ಎ.ಮಂಜು ಟಾಂಗ್ ನೀಡಿದರು.
ಸಿಎಂ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ವಿಚಾರವಾಗಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ. ಟಿ. ದೇವೇಗೌಡರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ನಮ್ಮ ಪಕ್ಷದ ಶಾಸಕರೆಲ್ಲರೂ ಕೂಡ ಜೆಡಿಎಸ್ ಪರವಾಗಿದ್ದೇವೆ ಎಂದು ಹೇಳಿದರು.
ಮುಡಾದಲ್ಲಿ 5000ಕ್ಕೂ ಹೆಚ್ಚಿನ ಹಣದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯಾರೇ ತಪ್ಪು ಮಾಡಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು. ಇದರಲ್ಲಿ ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ಜಿಟಿಡಿ ಮಾಡಿದ್ದರೆ ಜಿಟಿಡಿಗೆ ಆಗಲಿ. ಇಲ್ಲ ಮುಖ್ಯಮಂತ್ರಿಗಳು ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆ ಆಗಲಿ ಎಂದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ಬಂಗಾರಪ್ಪ ಎಲ್ಲರೂ ಕೂಡ ಆರೋಪ ಬಂದ ಮೇಲೆ ರಾಜೀನಾಮೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ನಾನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಸೈಟುಗಳನ್ನು ಮತ್ತೆ ಏಕೆ ವಾಪಸ್ ನೀಡಿದರು ಎಂದು ಪ್ರಶ್ನಿಸಿದರು.
ರಘುನಂದನ್ ಎಂಬ ವ್ಯಕ್ತಿ ದೊಡ್ಡ ಕಳ್ಳ. ಒಂದೇ ದಿನ 864 ಸೈಟುಗಳು ಬದಲಾವಣೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಸರ್ಕಾರದ ಬೊಕ್ಕಸಕ್ಕೆ ಯಾರು ಯಾರು ನಷ್ಟ ಉಂಟು ಮಾಡಬಾರದು. ಇದರಲ್ಲಿ ಯಾರೇ ಇದ್ದರೂ ಕೂಡ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.