ತುಮಕೂರು: ವಿವಿಧ ಯೋಜನೆಗಳ ಶಿಲಾನ್ಯಾಸ, ಶಂಕುಸ್ಥಾಪನೆಗೆ ಡಿ.2ರಂದು ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವನ್ನು "ಶಕ್ತಿ' ಪ್ರದರ್ಶನ ವೇದಿಕೆಯನ್ನಾಗಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ ತೀರ್ಮಾನಿಸಿದಂತಿದೆ. ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳಡಿ 1.46 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ, ಕಾರ್ಯಕ್ರಮ ಯಶಸ್ಸಿಗೊಳಿಸೋಣ ಎಂದು ಜಿ.ಪರಮೇಶ್ವರ ಸಲಹೆಯಿತ್ತರು. ನಗರದ ಎಸ್ಎಸ್ಐಟಿ ಕಾಲೇಜಿನ ಅತಿಥಿ ಗೃಹದಲ್ಲಿ ಸೋಮವಾರ ಕಾಂಗ್ರೆಸ್ ಶಾಸಕರು, ಮುಖಂಡರು, ಪರಾಜಿತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿವಿಧ ಯೋಜನೆಗಳ ಲಾನುಭವಿಗಳನ್ನು ಸವಲತ್ತು ವಿತರಣೆಗೆ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಕರೆತರಲಾಗುತ್ತಿದ್ದರು ಪಕ್ಷದ ಮುಖಂಡರು ಸಹ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಕರೆನೀಡಿದರು.
1.46 ಲಕ್ಷ ಲಾನುಭವಿಗಳು!: ಸಿಎಂ ಕಾರ್ಯಕ್ರಮ ಮೂಲಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಸರ್ಕಾರ ದಿವಾಳಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಹಣವಿಲ್ಲವೆಂಬ ವಿಪಕ್ಷದವರ ಟೀಕಾಸ್ತ್ರಗಳಿಗೆ "ಪ್ರತ್ಯಾಸ್ತ್ರ' ಹೂಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನುಸಿಎಂ ಕಾರ್ಯಕ್ರಮದಲ್ಲಿ ಸೇರಿಸುವಂತೆ ಪರಮೇಶ್ವರ ಸಲಹೆ ನೀಡಿದರು.
ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣ ಕೈಗಾರಿಕೆ, ಕಾರ್ಮಿಕ, ರೇಷ್ಮೆ, ಕಂದಾಯ, ವಿಕಲಚೇತನರ ಕಲ್ಯಾಣ, ಮಹಾನಗರಪಾಲಿಕೆ, ಹಾಲು ಒಕ್ಕೂಟ, ವಿವಿಧ ನಿಗಮಗಳು, ಎನ್ಆರ್ಎಲ್ಎಂ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳಡಿ 1.46 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು ಎಲ್ಲರನ್ನು ಕಾರ್ಯಕ್ರಮಕ್ಕೆ ಕರೆತರುವ ಗುರಿಯನ್ನು ಜಿಲ್ಲಾಡಳಿತ ನೀಡಲಾಗಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಸಹಕರಿಸುವಂತೆ ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಡಿ.ಟಿ.ವೆಂಕಟೇಶ್, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಕಾಂಗ್ರಸ್ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ಇಕ್ಬಾಲ್ ಅಹ್ಮದ್, ಷಣ್ಮುಖಪ್ಪ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಯುವ ಮುಖಂಡ ಶಶಿಹುಲಿಕುಂಟೆಮಠ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು ಸಹ ಉಪಸ್ಥಿತರಿದ್ದರು.