ಜಿಲ್ಲೆ

ಸಿಎಂ ಇಲ್ಲವೆ ಡಿಸಿಎಂಗೆ ಲಿಂಗಾಯತರ ಪಟ್ಟು

ಚಿತ್ರದುರ್ಗ: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಇಲ್ಲವೆ ಡಿಸಿಎಂ ಸ್ಥಾನ ಲಿಂಗಾಯತ ಸಮಾಜದವರಿಗೆ ನೀಡಲೇಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮಹೇಶ್ ಎಐಸಿಸಿಗೆ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಹಲವು ಮುಖಂಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಅದರಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, ಲಿಂಗಾಯತ ಸಮಾಜ ಪಕ್ಷಕ್ಕೆ ಶಕ್ತಿ ತುಂಬಿದೆ. ಆದ್ದರಿಂದ ಎಸ್.ಎಸ್.ಮಲ್ಲಿಕಾರ್ಜುನ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಈ ಮೂವರ ಪೈಕಿ ಒಬ್ಬರಿಗಾದರೂ ಸಿಎಂ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಹೊಳಲ್ಕೆರೆ ಕ್ಷೇತ್ರಕ್ಕೆ ಈ ಹಿಂದೆ ಮಂತ್ರಿ ಸ್ಥಾನ ಸಿಕ್ಕಿದೆ. ಚಿತ್ರದುರ್ಗಕ್ಕೆ ಈ ಭಾಗ್ಯ ದೊರೆತಿಲ್ಲ. ಅದಕ್ಕಾಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಚಿತ್ರದುರ್ಗ ಕ್ಷೇತ್ರದ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.

ಮಹಾಸಭಾ ಯುವ ಘಟಕದ ಅಧ್ಯಕ್ಷ ಕಾರ್ತಿಕ್, ವಾಣಿಜ್ಯ ಘಟಕದ ಉಪಾಧ್ಯಕ್ಷ ಟಿ.ದಯಾನಂದ ಪಾಟೀಲ್, ಖಜಾಂಚಿ ದಿವಾಕರ್ ಎಸ್.ಸಂಕೋಳ್ ಇತರರಿದ್ದರು.