ಸೋಮವಾರಪೇಟೆ: ಹದಿನೈದು ದಿನದೊಳಗೆ ರಸ್ತೆ ದುರಸ್ತಿಪಡಿಸುವಂತೆ ಮುಖ್ಯಮಂತ್ರಿಗಳೇ ಆದೇಶಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಡಿನಾಡೂರು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ನೇರುಗಳಲೆ ಹಾಗು ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದ ರಸ್ತೆ ದುರಸ್ತಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅನುದಾನ ನೀಡದ ಹಿನ್ನೆಲೆಯಲ್ಲಿ ಕೃಷಿಕರೊಬ್ಬರು ಮುಖ್ಯಮಂತ್ರಿಗೆ ದೂರು ನೀಡಿದ್ದರು. 15 ದಿನದೊಳಗೆ ಸ್ಥಳ ಪರಿಶೀಲಿಸಿ ರಸ್ತೆ ಸರಿಪಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಅ.12ರಂದು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ಆದೇಶ ಬಂದು 15 ದಿನಗಳಾದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಕೃಷಿಕ ಎಸ್.ಈ.ಅಣ್ಣಯ್ಯ ದೂರಿದ್ದಾರೆ.
ಅಬ್ಬೂರುಕಟ್ಟೆಯಿಂದ ಆಡಿನಾಡೂರು ಮಾರ್ಗವಾಗಿ ಹೆಬ್ಬಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ಸರಿಪಡಿಸುವಂತೆ ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮಕ್ಕೆ ಯಾರೂ ಮುಂದಾಗಲಿಲ್ಲ. ಹಾಗಾಗಿ, ಮುಖ್ಯಮಂತ್ರಿಗೆ ದೂರು ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಸಿ.ವಿ.ಹರಿದಾಸನ್ ಜಿಪಂ ಸಿಇಒಗೆ ಕ್ರಮಕ್ಕೆ ಆದೇಶಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.