ರೇವತಗಾಂವ: ರೇವತಗಾಂವ ಗ್ರಾಮದಲ್ಲಿನ ಸದ್ಗುರು ಸಿಂಹಗಢ ಮಹಾರಾಜರ ದೇಗುಲವು ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವಾಗಿದ್ದು, ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಹಲವು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಗ್ರಾಮದ ಸದ್ಗುರು ಸಿಂಹಗಢ ಮಹಾರಾಜರ 54ನೇ ಪುಣ್ಯಾರಾಧನೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಬೇಕಿದೆ. ಇದಕ್ಕೆ ಅಗತ್ಯವಿರುವ ಸಹಾಯ ಸಹಕಾರ ಮಾಡುತ್ತೇನೆ. ಶಾಸಕರ ನಿಧಿಯಲ್ಲಿ 5 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ನಾನು ಸಹ ಶಾಸಕರ ನಿಧಿಯಿಂದ 50 ಲಕ್ಷ ರೂ.ಗಳ ಅನುದಾನ ನೀಡುತ್ತೇನೆ. ಪುರಾತತ್ವ ಇಲಾಖೆಯೊಂದಿಗೆ ಚರ್ಚಿಸಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತೇನೆ ಎಂದರು.
ಚಡಚಣದ ಜವಳಿ ವ್ಯಾಪಾರಸ್ಥ ಸಿದ್ದರಾಮ ಭಂಢರಕವಟೆ ದೇವಸ್ಥಾನದ ಮೆಟ್ಟಿಲುಗಳ ನಿರ್ಮಾಣಕ್ಕೆ 1.50ಲಕ್ಷ ರೂ.ಗಳನ್ನುನೀಡಿದರು.