ಸಿಂದಗಿ: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ತಂಡ ಮಂಗಳವಾರ ದಿಢೀರ್ ಭೇಟಿ ನೀಡಿ, ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಸಿಗುತ್ತಿರುವ ಆರೋಗ್ಯ ಸೌಲಭ್ಯ ಹಾಗೂ ನ್ಯೂನ್ಯತೆಗಳ ಕುರಿತು ಮಾಹಿತಿ ಪಡೆಯಿತು.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಹಾಗೂ ಡಿವೈಎಸ್ಪಿ ಸುರೇಶ ರಡ್ಡಿ, ಪಿಎಸ್‌ಐ ಆನಂದ ಠಕ್ಕಣ್ಣವರ ಮತ್ತು ಆನಂದ ಡೋಣಿ ಅವರ ತಂಡ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿತು.
ಆಸ್ಪತ್ರೆಗೆ ಆರೋಗ್ಯ ಸೇವೆ ಪಡೆಯಲು ಬಂದಿದ್ದ ಸಾರ್ವಜನಿಕರನ್ನು ಮುತುವರ್ಜಿಯಿಂದ ಲೋಕಾಯುಕ್ತರ ತಂಡ ಮಾತನಾಡಿಸಿತು.
ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ತೆರೆದ ಹಾಗೂ ಬೀಗ ಜಡಿದ ಪ್ರತಿ ಕೋಣೆಗಳನ್ನು ಬೀಗ ತೆರೆಸಿ, ಬಂದ ಮಾಡಲಾಗಿದ್ದ ಶೌಚಗೃಹ, ಕೋಣೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಿಬ್ಬಂದಿಗಳಿಂದ ನ್ಯೂನ್ಯತೆಯ ಮಾಹಿತಿ, ವೈದ್ಯ ಮತ್ತು ಡಿ ಗ್ರುಪ್ ನೌಕರರ ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಗೈರು ಕುರಿತು ಮಾಹಿತಿ ಪಡೆದರು.
ಲೋಕಾ ಎಸ್ಪಿ ಟಿ. ಮಲ್ಲೇಶ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಲೋಕಾಯುಕ್ತರ ಅದೇಶದಂತೆ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಲಾಗಿದೆ. ಅಲ್ಲಿನ ಸವಲತ್ತು, ಸಾರ್ವಜನಿಕರಿಗೆ ಒದಗಿಸುತ್ತಿರುವ ಸಮರ್ಪಕ ಆರೋಗ್ಯ ಸೇವೆ, ಸರ್ಕಾರದಿಂದ ದೊರೆತ ವೈದ್ಯಕೀಯ ಸಲಕರಣೆಗಳ ಬಳಕೆ, ಔಷಧಗಳ ಬಳಕೆಯಲ್ಲಿ ಸೂಕ್ತ ದಾಖಲಾತಿಗಳ ನಿರ್ವಹಣೆಯಲ್ಲಿನ ಲೋಪ ಸೇರಿ ವಿದ್ಯುತ್ ಹಾಗೂ ಶೌಚಗೃಹ ಸಮಸ್ಯೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.