ಸಿಂದಗಿ ಮತಕ್ಷೇತ್ರದ ಕೊಕಟನೂರ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆಯ ಗೋಡೆಯಲ್ಲಿ ಅರಳಿದ ವರ್ಲಿ ಕಲೆ 
ಜಿಲ್ಲೆ

ಸಿಂದಗಿ ಮತಗಟ್ಟೆಗಳಲ್ಲಿ ವರ್ಲಿ ಕಲೆಯ ಸಿಂಗಾರ

ಸಿಂದಗಿ: ಪ್ರಸಕ್ತ ವಿಧಾನಸಭಾ ಚುನಾವಣೆಗಾಗಿ ಜಿಲ್ಲಾ ಸ್ವೀಪ್ ಸಮಿತಿ, ಮತದಾನ ಪ್ರಮಾಣ ಹೆಚ್ಚಿಸಲು ಮತಗಟ್ಟೆಗಳಲ್ಲಿ ವರ್ಲಿ ಕಲೆಯ ಜತೆಗೆ ನಾಡಿನ ಜಾನಪದ ಸಂಸ್ಕೃತಿಯನ್ನು ವಿಶೇಷವಾಗಿ ಬಿಂಬಿಸುವ ಮೂಲಕ ಮತದಾನದ ಜಾಗೃತಿಯತ್ತ ಮುಂದಾಗಿದೆ.

ಮತಕ್ಷೇತ್ರದಲ್ಲಿನ 271 ಮತಗಟ್ಟೆಗಳಲ್ಲಿ 250 ಮತಗಟ್ಟೆಗಳಲ್ಲಿ ಮತ ಜಾಗೃತಿಗಾಗಿ ಪೇಂಟಿಂಗ್ ಹಾಗೂ ವಿವಿಧ ಕಲಾಕೃತಿಗಳನ್ನು ಚಿತ್ರಿಸಲಾಗಿದೆ.

ಮತಗಟ್ಟೆಗಳ ಗೋಡೆಗಳಲ್ಲಿ ಮತದಾನದ ಮಹತ್ವದ ಬರಹಗಳ ಜತೆಗೆ ಮತಗಟ್ಟೆಯಲ್ಲಿನ ಕಾರ್ಯವೈಖರಿ, ಮತದಾರರಲ್ಲಿರಬೇಕಾದ ಸಭ್ಯತೆ, ಅಂಗವಿಕಲರಿಗಾಗಿ ಒದಗಿಸುವ ಸೌಲಭ್ಯಗಳ ಗೆರೆ (ಜ್ಯಾಮಿತೀಯ ಆಕಾರಗಳಿಂದ ರೂಪಿತವಾದ ವರ್ಲಿ ಕಲೆ)ಚಿತ್ರಗಳನ್ನು ರೂಪಿಸಲಾಗಿದೆ. ಮತಗಟ್ಟೆಯ ಬಾಗಿಲಲ್ಲಿ, ದೊಡ್ಡಾಟದ ಪಾತ್ರ, ರಂಗಕಲೆ, ಯಕ್ಷಗಾನ, ಪಕ್ಷಿಗಳ ಚಿತ್ರಣ, ದಾಸ ಪರಂಪರೆ, ಗ್ರಾಮೀಣ ಸಂಭ್ರಮ, ಚಾವಡಿ, ಧಾರ್ಮಿಕ ಪರಂಪರೆ ಸೇರಿದಂತೆ ಜಾನಪದ ಸೊಬಗು ರಾರಾಜಿಸುತ್ತಿದೆ.

ಪಟ್ಟಣದ ಕಾಳಿಕಾನಗರದ ಕೆಬಿಎಸ್ ಶಾಲೆ, ಬಸವನಗರದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ವಿದ್ಯಾನಗರದ ಗಂಡು ಮಕ್ಕಳ ಶಾಲೆ, ಪ್ರಸೂತಿಗೃಹದ ಎದುರಿನ ಗಂಡು ಮಕ್ಕಳ ಶಾಲೆ, ಆಲಮೇಲದ ಹರಿಜನ ಕೇರಿಯ ಗಂಡು ಮಕ್ಕಳ ಶಾ ಸೇರಿದಂತೆ ಒಟ್ಟು 5 ಸಖಿ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.

ತಾಲೂಕಿನ ಬಳಗಾನೂರ ಗ್ರಾಮದ ಮತಗಟ್ಟೆ ಸಂಖ್ಯೆ 76ರಲ್ಲಿ ವಿಶೇಷ ಚೇತನರಿಗಾಗಿ ಸಕಲ ಸೌಲಭ್ಯಗಳುಳ್ಳ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಅಲ್ಲದೇ ಮಲಘಾಣ ಗ್ರಾಮದ ಸರ್ಕಾರಿ ಗಂಡುಮಕ್ಕಳ ಶಾಲೆಯ ರೂಮ್ ನಂ.6ರಲ್ಲಿ ಯುವ ಮತದಾರರಿಗಾಗಿ ಹಾಗೂ ಕುಳೇಕುಮಟಗಿ ಗ್ರಾಮದ ಮತಗಟ್ಟೆ ಸಂಖ್ಯೆ 56ರ ರೂಮ್ ನಂ.7ರಲ್ಲಿ ಅಲ್ಲಿನ ಪ್ರಧಾನ ಬೆಳೆಯ ಮೂಲಕ ಮತದಾರರಿಗೆ ಸ್ವಾಗತ ಕೋರಲಾಗುತ್ತಿದ್ದು, ತಾಲೂಕಿನ ಕೊಕಟನೂರ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 225ರಲ್ಲಿ ಹೆಚ್ಚಾಗಿ ಲಂಬಾಣಿ ಜನಾಂಗದ ಮತದಾರರಿದ್ದು, ಆ ಜನರ ಜನಾಂಗೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೂಲಕ ಮತಗಟ್ಟೆಯ ಅಂದ ಹೆಚ್ಚಿಸಲಾಗಿದೆ.

ಬಹುತೇಕ ಮತಗಟ್ಟೆಗಳನ್ನು ಅಂದವಾಗಿ ಚಿತ್ರಿಸುವ ಮೂಲಕ ಜನರಲ್ಲಿ ಮತದಾನದ ಜಾಗೃತಿ, ಮತದಾನ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲಿ ಯಾವುದೇ ಕೊರತೆಗಳಾಗದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಮತದಾರರು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಯಶಸ್ವಿ ಹೆಜ್ಜೆಗೆ ಅಣಿಯಾಗಬೇಕು. ಬಾಬು ರಾಠೋಡ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ